×
Ad

ಯೋಗ ಆರೋಗ್ಯಕರ, ಸಮತೋಲಿತ ಜೀವನಕ್ಕೆ ವಿಶ್ವಾಸಾರ್ಹ ಸಾಧನ: ಥಾವರ್ ಚಂದ್ ಗೆಹ್ಲೋಟ್

Update: 2026-06-21 15:18 IST

ಬೆಂಗಳೂರು: “ಭಾರತದ ಸಾವಿರಾರು ವರ್ಷಗಳಷ್ಟು ಹಳೆಯದಾದ ಯೋಗ ಪರಂಪರೆಗೆ ಜಾಗತಿಕ ಮನ್ನಣೆ ತಂದುಕೊಟ್ಟಿರುವ ಅಂತಾರಾಷ್ಟ್ರೀಯ ಯೋಗ ದಿನವು ಇಂದು ವಿಶ್ವದ ಅತಿದೊಡ್ಡ ಆರೋಗ್ಯ ಮತ್ತು ಕ್ಷೇಮ ಅಭಿಯಾನಗಳಲ್ಲಿ ಒಂದಾಗಿ ರೂಪುಗೊಂಡಿದೆ” ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

ಆಯುಷ್ ಇಲಾಖೆಯ ವತಿಯಿಂದ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ–2026 ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಭ್ಯಾಸ ಮಾಡಿದ ಅವರು, ಬಳಿಕ ಮಾತನಾಡುತ್ತಿದ್ದರು.

“ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾದ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಅತ್ಯಂತ ವಿಶ್ವಾಸಾರ್ಹ ಸಾಧನವಾಗಿದೆ. ಯೋಗವು ಮನಸ್ಸು ಮತ್ತು ದೇಹದ ಏಕತೆ, ಆಲೋಚನೆ ಮತ್ತು ಕ್ರಿಯೆಯ ಸಮನ್ವಯ, ಸಂಯಮ ಮತ್ತು ತೃಪ್ತಿ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ ಹಾಗೂ ಆರೋಗ್ಯ ಮತ್ತು ಯೋಗಕ್ಷೇಮದ ಸಮಗ್ರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ” ಎಂದು ರಾಜ್ಯಪಾಲರು ತಿಳಿಸಿದರು.

“ಇಂದಿನ ಸ್ಪರ್ಧಾತ್ಮಕ ಮತ್ತು ಒತ್ತಡದ ಜೀವನಶೈಲಿಯು ಅನೇಕ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಸೃಷ್ಟಿಸಿದ್ದು, ಅಂತಹ ಸಂದರ್ಭದಲ್ಲಿ ಯೋಗವು ಆರೋಗ್ಯಕರ ದೇಹ, ಶಾಂತ ಮನಸ್ಸು ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ಒದಗಿಸುತ್ತದೆ”ಎಂದು ಅವರು ಹೇಳಿದರು.

“ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಉಪಕ್ರಮದ ಮೇರೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2014ರಲ್ಲಿ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿರುವುದು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆಯ ವಿಷಯವಾಗಿದೆ. ಇಂದು 190ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಜನರು ಯೋಗವನ್ನು ಅಭ್ಯಾಸ ಮಾಡುತ್ತಿದ್ದು, ಇದು ಭಾರತದ ಜ್ಞಾನ, ಸಂಸ್ಕೃತಿ ಮತ್ತು “ವಸುಧೈವ ಕುಟುಂಬಕಂ”ಎಂಬ ಮನೋಭಾವಕ್ಕೆ ದೊರೆತ ಜಾಗತಿಕ ಮಾನ್ಯತೆಯಾಗಿದೆ”ಎಂದು ಅವರು ಅಭಿಪ್ರಾಯಪಟ್ಟರು.

“ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕಾಗಿ ಆರೋಗ್ಯವಂತ, ಶಕ್ತಿಯುತ ಹಾಗೂ ಮಾನಸಿಕವಾಗಿ ಸದೃಢ ಯುವಜನತೆ ಅಗತ್ಯವಾಗಿದ್ದು, ಈ ದಿಕ್ಕಿನಲ್ಲಿ ಯೋಗವು ಪರಿಣಾಮಕಾರಿ ಸಾಧನವಾಗಿದೆ. ಯುವಕರು ಪ್ರತಿದಿನ ಸ್ವಲ್ಪ ಸಮಯವನ್ನು ಯೋಗಕ್ಕೆ ಮೀಸಲಿಟ್ಟರೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು” ಎಂದು ರಾಜ್ಯಪಾಲರು ಕರೆ ನೀಡಿದರು.

“ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯವಾದ “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ”ವಯೋವೃದ್ಧರನ್ನು ದೈಹಿಕವಾಗಿ ಸಕ್ರಿಯರಾಗಿ, ಮಾನಸಿಕವಾಗಿ ಆರೋಗ್ಯವಂತರಾಗಿ ಮತ್ತು ಸ್ವಾವಲಂಬಿಗಳಾಗಿ ರೂಪಿಸುವಲ್ಲಿ ಯೋಗದ ಮಹತ್ವವನ್ನು ಪ್ರತಿಪಾದಿಸುತ್ತದೆ'' ಎಂದು ಅವರು ಹೇಳಿದರು.

ಸಂದರ್ಭದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ನಟಿ ಸುಧಾರಾಣಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News