×
Ad

Bengaluru | ಕಳಪೆ ಕಾಮಗಾರಿ ಹಿನ್ನಲೆ ಸಹಾಯಕ ಇಂಜಿನಿಯರ್ ಅಮಾನತು; ಗುತ್ತಿಗೆದಾರ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಕೃಷ್ಣಬೈರೇಗೌಡ ನಿರ್ದೇಶನ

Update: 2026-06-21 00:00 IST

ಸಚಿವ ಕೃಷ್ಣಬೈರೇಗೌಡ 

ಬೆಂಗಳೂರು: ನಗರದ ಸಂಪಂಗಿರಾಮನಗರ ವ್ಯಾಪ್ತಿಯಲ್ಲಿ ನಡೆದಿರುವ ರಸ್ತೆ ಡಾಂಬರೀಕರಣ ಕಾಮಗಾರಿಯಲ್ಲಿ ಭಾರಿ ಕಳಪೆ ನಿರ್ಮಾಣ ಪತ್ತೆಯಾದ ಹಿನ್ನೆಲೆಯಲ್ಲಿ ಸಹಾಯಕ ಇಂಜಿನಿಯರ್ ಪೂಜಾರಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಇದರೊಂದಿಗೆ ಕಾಮಗಾರಿ ನಡೆಸಿದ ಗುತ್ತಿಗೆದಾರ ಕಂಪೆನಿಯನ್ನು ಕಪ್ಪುಪಟ್ಟಿಗೆ(ಬ್ಲಾಕ್‍ಲಿಸ್ಟ್) ಸೇರಿಸಲು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ನಿರ್ದೇಶನ ನೀಡಿದ್ದಾರೆ.

ಒಬ್ಬ ಜವಾಬ್ದಾರಿಯುತ ಸರಕಾರಿ ಅಧಿಕಾರಿಯಾಗಿ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದ ಹಾಗೂ ಗುತ್ತಿಗೆದಾರರ ಕಾನೂನುಬಾಹಿರ ಕೃತ್ಯಕ್ಕೆ ಸಾಥ್ ನೀಡಿ ಕರ್ತವ್ಯ ಲೋಪ ಎಸಗಿದ ಕಾರಣಕ್ಕಾಗಿ ಈ ಕ್ರಮ ಜರುಗಿಸಲಾಗಿದೆ.

ಸಚಿವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, 1957ರ ಸಿಸಿಎ ನಿಯಮ 10ರ ಅಡಿಯಲ್ಲಿ ಸಂಪಂಗಿರಾಮನಗರ ವಾರ್ಡ್ ಸಂಖ್ಯೆ 110ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಇಂಜಿನಿಯರ್ ಪೂಜಾರಪ್ಪ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ವಾರ್ಡ್ ಸಂಖ್ಯೆ 110ರ ಸಂಪಂಗಿರಾಮನಗರ ವ್ಯಾಪ್ತಿಯಲ್ಲಿ ಇನ್‍ಫ್ರಾಸ್ಟ್ರಕ್ಟರ್ ಪ್ರೋಗ್ರಾಮ್ ಅಡಿಯಲ್ಲಿ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಲ್ಲಿ (ಆರ್ಟೀಲಿಯಲ್ ಮತ್ತು ಸಬ್ ಆರ್ಟೀಲಿಯಲ್) ಇತ್ತೀಚೆಗೆ ಡಾಂಬರೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಆದರೆ, ಈ ಕಾಮಗಾರಿಯ ಪರಿಶೀಲನೆ ನಡೆಸಿದಾಗ ಗಂಭೀರ ಲೋಪದೋಷಗಳು ಎದ್ದು ಕಾಣಿಸಿದೆ.

ಸರಕಾರದ ನಿಯಮಾವಳಿ ಹಾಗೂ ಕ್ರಿಯಾಯೋಜನೆಯ ಅನುಸಾರ ಇರಬೇಕಾದ ನಿಗದಿತ ಪ್ರಮಾಣದ ಮತ್ತು ಅಗತ್ಯವಿರುವ ದಪ್ಪದ (ಥಿಕ್‍ನೆಸ್) ಡಾಂಬರನ್ನು ಬಳಸದೆ, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಳಪೆಯಾಗಿ ರಸ್ತೆ ನಿರ್ಮಾಣ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News