ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ | ಗುಣಾತ್ಮಕ ಚಲನಚಿತ್ರಗಳಿಗೆ ಸಹಾಯಧನ ನೀಡಲು 20 ಕೋಟಿ ರೂ. ಮೀಸಲು
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಗುಣಾತ್ಮಕ ಚಲನಚಿತ್ರಗಳಿಗೆ ನೀಡಲಾಗುತ್ತಿದ್ದ ಸಹಾಯಧನವು ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, 2025-26ನೇ ಸಾಲಿನಲ್ಲಿ ಮೂರು ವರ್ಷಗಳ ಚಲನಚಿತ್ರಗಳನ್ನು ಗುರುತಿಸಿ ಸಹಾಯಧನ ನೀಡಲಾಗಿದೆ. ಪ್ರಸಕ್ತ ಸಾಲಿಗೆ ಉಳಿದ ಮೂರು ವರ್ಷಗಳ ಚಲನಚಿತ್ರಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ಸಹಾಯಧನ ನೀಡಲು 20 ಕೋಟಿ ರೂ. ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿದ ಅವರು, ಮಹಾತ್ಮ ಗಾಂಧೀಜಿ ವಿಚಾರಧಾರೆಗಳನ್ನು ಯುವಜನರಿಗೆ ತಿಳಿಸಲು ಮತ್ತು ಜಿಲ್ಲಾ ಗಾಂಧಿ ಭವನಗಳನ್ನು ಪುನಃಶ್ಚೇತನಗೊಳಿಸಲು ‘ಮಹಾತ್ಮಾ ಗಾಂಧಿ ಜನ ಶಿಕ್ಷಣ ಕೇಂದ್ರ’ ಯೋಜನೆಯನ್ನು ರೂಪಿಸಿ ಜಾರಿಗೊಳಿಸುವುದು. ಇಲಾಖೆಯಲ್ಲಿ ಲಭ್ಯವಿರುವ ಛಾಯಾಚಿತ್ರಗಳು ಹಾಗೂ ವೀಡಿಯೊ ಡಾಕ್ಯುಮೆಂಟರಿಗಳನ್ನು ಡಿಜಿಟಲ್ ಮಾದರಿಗೆ ಪರಿವರ್ತಿಸಿ, ‘ಡಿಜಿಟಲ್ ದೃಶ್ಯ ಕರ್ನಾಟಕ’ ಎಂಬ ವೇದಿಕೆಯೊಂದನ್ನು ಕಲ್ಪಿಸಲಾಗುವುದು. ಇದಕ್ಕಾಗಿ ಐದು ಕೋಟಿ ರೂ.ಗಳನ್ನು ಒದಗಿಸುವುದು ಎಂದರು.
ರಾಜ್ಯದಲ್ಲಿ ಚಲನಚಿತ್ರ ಹಾಗೂ ಇತರೆ ಚಿತ್ರೀಕರಣಗಳಿಗೆ ಅಗತ್ಯವಿರುವ ವಿವಿಧ ಇಲಾಖೆಗಳ ಅನುಮತಿಗಳನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲಿ ಒಂದೇ ವೇದಿಕೆಯಲ್ಲಿ ನೀಡುವ ಸಲುವಾಗಿ ‘ಸಿನಿ ಮಿತ್ರ’ ಎಂಬ ಆನ್‍ಲೈನ್ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೊಳಿಸುವುದು. ರಾಜ್ಯದ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಚಿತ್ರೀಕರಣ ಸ್ಥಳಗಳ ಮಾಹಿತಿಯನ್ನು ಒಳಗೊಂಡ ‘ಕರ್ನಾಟಕ ಫಿಲ್ಮ್ ಲೊಕೇಷನ್ ಡಿಜಿಟಲ್ ಮ್ಯಾಪ್’ನ್ನು ಒಂದು ಕೋಟಿ ರೂ. ಗಳಲ್ಲಿ ಅಭಿವೃದ್ಧಿಪಡಿಸುವುದು ಎಂದು ಅವರು ತಿಳಿಸಿದರು.
ಮೈಸೂರು ಫಿಲ್ಮ್ ಸಿಟಿಯನ್ನು ಸ್ಥಾಪಿಸಲು ಈ ಮೊದಲು 500 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿತ್ತು. ಫಿಲ್ಮ್ ಸಿಟಿ ಸೌಲಭ್ಯಗಳನ್ನು ಒಳಗೊಂಡಂತೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಥೀಮ್ ಪಾರ್ಕ್, ಸ್ಟಾರ್ ಹೊಟೇಲ್ ಮತ್ತು ರೆಸ್ಟೋರೆಂಟ್‍ಗಳನ್ನು ಒಳಗೊಂಡು ಪಿಪಿಪಿ ಮಾದರಿಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿ ವ್ಯವಹಾರ ವಹಿವಾಟುದಾರರನ್ನು ನೇಮಿಸಲಾಗಿದೆ. ದಿವಂಗತ ಪುಟ್ಟಣ್ಣ ಕಣಗಾಲ್ರವರ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ರೂಪಿಸಲಾಗುವುದು. ಗಾಂಧೀಜಿ ಭೇಟಿ ಕೊಟ್ಟ ರಾಜ್ಯದ ವಿವಿಧ ಸ್ಥಳಗಳಲ್ಲಿ ಅವರ ಸ್ಮರಣಾರ್ಥ ಗಾಂಧಿ ಸ್ಮಾರಕ ಸ್ತಂಭಗಳನ್ನು ನಿರ್ಮಿಸಲಾಗುವುದು ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.