ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ಕಾರ್ಯ ಸಾಧ್ಯತಾ ವರದಿ : ಸಿದ್ದರಾಮಯ್ಯ
► ಬಂದರುಗಳು ಮತ್ತು ಸರಕು ಸಾಗಾಣಿಕೆ ವಲಯದ ಅಭಿವೃದ್ಧಿಗಾಗಿ 'ಸಮಗ್ರ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ನೀತಿ’ ► ಪ್ರಸಕ್ತ ಸಾಲಿನಲ್ಲಿ 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ವಿತರಿಸುವ ಗುರಿ
ಬೆಂಗಳೂರು : ದೇಶದ 3ನೆ ಅತಿದೊಡ್ಡ ವಿಮಾನ ನಿಲ್ದಾಣವಾಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದಟ್ಟಣೆಯನ್ನು ತಗ್ಗಿಸಲು ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ತಾಂತ್ರಿಕ ಅಭಿಪ್ರಾಯ ಪಡೆದು ಕಾರ್ಯ ಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿದ ಅವರು, ರೈಲ್ವೆ ಇಲಾಖೆಯೊಂದಿಗೆ ಶೇ.50:50ರ ಅನುಪಾತದಲ್ಲಿ ವೆಚ್ಚ ಹಂಚಿಕೆ ಆಧಾರದ ಮೇಲೆ 9 ರೈಲ್ವೆ ಮಾರ್ಗಗಳ ಅಭಿವೃದ್ದಿಯನ್ನು ಕೈಗೊಳ್ಳಲಾಗುತ್ತಿದೆ. ಇದರ ಪೈಕಿ ಏಳು ರೈಲ್ವೆ ಮಾರ್ಗಗಳಿಗೆ ಭೂಸ್ವಾಧೀನಕ್ಕಾಗಿ 2,950 ಕೋಟಿ ರೂ. ಗಳನ್ನು ಹಾಗೂ ನಿರ್ಮಾಣ 2,682 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. 2026-27ನೇ ಸಾಲಿನ ಆಯವ್ಯಯದಲ್ಲಿ 600 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದರು.
ಬೆಂಗಳೂರು ಉಪನಗರ ರೈಲು ಯೋಜನೆಯ ನಾಲ್ಕು ಕಾರಿಡಾರ್‍ಗಳ ಪೈಕಿ ಕಾರಿಡಾರ್-2ಕ್ಕೆ (ಬೆನ್ನಿಗಾನಹಳ್ಳಿ-ಚಿಕ್ಕಬಾಣಾವರ) ಅಗತ್ಯವಿರುವ ಶೇ.100ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಕಾಮಗಾರಿಯು ಪ್ರಗತಿಯಲ್ಲಿರುತ್ತದೆ. ಕಾರಿಡಾರ್-4ಕ್ಕೆ (ಹೀಲಲಿಗೆ-ರಾಜಾನುಕುಂಟೆ) ಅಗತ್ಯವಿರುವ ಭೂಮಿಯ ಭೂಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಡಿಸೆಂಬರ್ 2030ರ ಅಂತ್ಯಕ್ಕೆ ಎರಡು ಕಾರಿಡಾರ್‍ಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈ ಕಾಮಗಾರಿಗಳಿಗೆ 500 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ಮುಖ್ಯಾಂಶಗಳು:
*ರಾಜ್ಯದಲ್ಲಿನ ಏಳು ದೇಶೀಯ ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿಗೆ 200 ಕೋಟಿ ರೂ. ಅನುದಾನ ಮೀಸಲು.
*ವಿಜಯಪುರ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳ ಆವರಣದಲ್ಲಿ ಕ್ರಮವಾಗಿ ಫ್ಲೈಟ್ ಟ್ರೈನಿಂಗ್ ಸ್ಕೂಲ್ ಹಾಗೂ ಮ್ಯಾನುಫ್ಯಾಕ್ಚರಿಂಗ್/ ಅಸೆಂಬ್ಲಿ ಆಫ್ ಏರ್‍ಕ್ರಾಫ್ಟ್ ಚಟುವಟಿಕೆಗಳನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲು ಕ್ರಮ.
*ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ತದಡಿ ಪ್ರದೇಶದಲ್ಲಿ ಪರಿಸರ ಸ್ನೇಹಿ ವಸತಿ ವ್ಯವಸ್ಥೆ, ಪ್ರವಾಸಿ ಮಾಹಿತಿ ಕೇಂದ್ರಗಳು, ಪರಿಸರ ಸ್ನೇಹಿ ವಾಕಿಂಗ್ ಕಾರಿಡಾರ್ ಅಭಿವೃದ್ಧಿ.
*ಬೈಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ದ್ವಿಪಥೀಕರಣದ 70 ಕಿ.ಮೀ. ರೈಲು ಮಾರ್ಗಗಳ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 100 ಕೋಟಿ ರೂ. ನಿಗದಿ.
*ಬಂದರುಗಳು ಮತ್ತು ಸರಕು ಸಾಗಾಣಿಕೆ ವಲಯದ ಅಭಿವೃದ್ಧಿಗಾಗಿ 'ಸಮಗ್ರ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ನೀತಿ’ ರೂಪಿಸಲಾಗುವುದು.
*ಮೀನು ಸಾಕಾಣಿಕೆ, ಇಂಧನ ನವೀಕರಿಸಬಹುದಾದ ಉತ್ಪಾದನೆಗೆ ಸಂಬಂಧಿತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ‘ಕರ್ನಾಟಕ ಸ್ಟೇಟ್ ಆಫ್ ಶೋರ್ ರಿಸೋರ್ಸ್ ಡವಲಪ್‍ಮೆಂಟ್ ಅಂಡ್ ಯುಟಿಲೈಸೇಷನ್ ಪಾಲಿಸಿ’ ರೂಪಿಸುವುದು.
ಸಹಕಾರ | ಪ್ರಸಕ್ತ ಸಾಲಿನಲ್ಲಿ 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ವಿತರಿಸುವ ಗುರಿ:
ಪ್ರಸಕ್ತ ಸಾಲಿನಲ್ಲಿ 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 30 ಸಾವಿರ ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ 2026-27ನೆಯ ಸಾಲಿನ ಬಜೆಟ್ ಮಂಡಿಸಿದ ಅವರು, ಪ್ರಸಕ್ತ ಸಾಲಿನಲ್ಲಿ 1,628 ಸಹಕಾರ ಸಂಘಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಸಹಕಾರ ಸಂಘಗಳ ನಿಬಂಧಕರ ಹಂತದಲ್ಲಿ ವಿವಿಧ ಸೇವೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ಒದಗಿಸಲು ದತ್ತಾಂಶವನ್ನು ಆನ್‍ಲೈನ್‍ನಲ್ಲಿ ನಿರ್ವಹಿಸಲು ಕ್ರಮವಹಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆದ ಮೆಕ್ಕೆಜೋಳದ ಬೆಲೆ ಕುಸಿತದಿಂದ ಸಂಕಷ್ಟಕ್ಕೀಡಾದ ರೈತರ ಹಿತ ಕಾಪಾಡಲು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು ನಮ್ಮ ಸರಕಾರ 100 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಮುಖ್ಯಾಂಶಗಳು..
* ಕರ್ನಾಟಕ ರಾಜ್ಯ ಉಗ್ರಾಣ ನಿಗಮವನ್ನು ಆರ್ಥಿಕವಾಗಿ ಸದೃಢಗೊಳಿಸಲು ನಿಗಮದ ಅನುಪಯುಕ್ತ ಆಸ್ತಿಗಳ ನಗದೀಕರಣಕ್ಕೆ ಚಿಂತನೆ.
* ಪ್ರಸಕ್ತ ಸಾಲಿನಲ್ಲಿ ಮೈಸೂರು(ಬಂಬೂ ಬಜಾರ್) ಮತ್ತು ಹುಬ್ಬಳ್ಳಿ (ಕಾಟನ್ ಮಾರ್ಕೆಟ್) ಕೇಂದ್ರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ.
* ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯಚಟುವಟಿಕೆಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲು 10 ಕೋಟಿ ರೂ. ವೆಚ್ಚದಲ್ಲಿ ಎಂಟಪ್ರ್ರೈಸ್ ರಿಸೋರ್ಸ್ ಪ್ಲಾನಿಂಗ್(ಇಆರ್‍ಪಿ) ವ್ಯವಸ್ಥೆ ಜಾರಿ.
* ಪ್ರತಿ ಜಿಲ್ಲೆಯಲ್ಲಿ ‘ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್’ ಸ್ಥಾಪಿಸಲು ಆರ್‍ಬಿಐಗೆ ಪ್ರಸ್ತಾವನೆ.