×
Ad

ಬೆಂಗಳೂರಿನಲ್ಲಿ 400ಕ್ಕೂ ಅಧಿಕ ಮನೆ ನೆಲಸಮ; ಮೂರು ಸಾವಿರಕ್ಕೂ ಅಧಿಕ ಮಂದಿ ಬೀದಿಪಾಲು

Update: 2025-12-20 20:54 IST

ಬೆಂಗಳೂರು : ಶನಿವಾರದಂದು ಇಲ್ಲಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯ ಫಕೀರ್ ಕಾಲನಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಸುಮಾರು 400ಕ್ಕೂ ಅಧಿಕ ಮನೆಗಳನ್ನು ಕೆಡವಿದ್ದು, 3,000ಕ್ಕೂ ಹೆಚ್ಚು ಜನರನ್ನು ಬೀದಿಪಾಲು ಮಾಡಿದ್ದಾರೆ.

ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆಯ ನೆಪದಲ್ಲಿ, ಒಟ್ಟು 9 ಟ್ರ‍್ಯಾಕ್ಟರ್, 9 ಜೆ.ಸಿ.ಬಿ ಯಂತ್ರಗಳನ್ನು ಕಾರ್ಯಾಚರಣೆಗೆ ಬಳಕೆ ಮಾಡಿಕೊಂಡು ಮನೆಗಳನ್ನು ಕೆಡವಲಾಗಿದೆ. ಈ ಕಾಲನಿಯಲ್ಲಿ ಶೇ.90ರಷ್ಟು ಅಲ್ಪಸಂಖ್ಯಾತ ಸಮುದಾಯದ ಕುಟುಂಬಗಳೇ ವಾಸವಾಗಿದ್ದು, 30 ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದ ಜನರನ್ನು ಒಕ್ಕಲೆಬ್ಬಿಸಿದ್ದಾರೆ.

‘ಮೂರು ದಶಕಗಳಿಂದ ನಾವು ಇದೇ ಜಾಗದಲ್ಲಿ ವಾಸ ಮಾಡುತ್ತಿದ್ದೇವೆ. ನಮಗೆ ನಮ್ಮ ಮನೆ ಬೇಕು. ಈಗ ನಮಗೆ ತಿನ್ನಲು ಊಟವೂ ಇಲ್ಲವಾಗಿದೆ. ಈ ರೀತಿಯ ಪರಿಸ್ಥಿತಿಯಲ್ಲಿ ನಾವು ನಮ್ಮ ಮಕ್ಕಳನ್ನು ಕರೆದುಕೊಂಡು ಎಲ್ಲಿ ಹೋಗಬೇಕು’ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

 

‘ಈ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸಲು ಸರಕಾರವೇ ಅವಕಾಶ ನೀಡಿತ್ತು. ಸರಕಾರದ ಸೂಚನೆಯಂತೆಯೇ ನಾವಿಲ್ಲಿ ಮನೆ ನಿರ್ಮಿಸಿಕೊಂಡು ಬದುಕುತ್ತಿದ್ದೇವೆ. ಆಧಾರ್ ಕಾರ್ಡ್‌ಗಳು, ಮತದಾರರ ಗುರುತಿನ ಚೀಟಿಗಳು ಮತ್ತು ಇತರ ಎಲ್ಲ ದಾಖಲೆಗಳನ್ನು ಹೊಂದಿದ್ದು, ಕೂಲಿ ಕೆಲಸಗಳ ಮೂಲಕ ಜೀವನ ಸಾಗಿಸುತ್ತಿದ್ದೇವೆ’ ಎಂದು ಮನೆ ಕಳೆದುಕೊಂಡ ಸಂತ್ರಸ್ತರು ತಿಳಿಸಿದ್ದಾರೆ.

‘ಹಲವು ಕುಟುಂಬಗಳು ಮನೆಗಳನ್ನು ಆಧಾರವಾಗಿಟ್ಟು, ಬ್ಯಾಂಕ್‌ಗಳಿಂದ ಸಾಲವನ್ನೂ ಪಡೆದಿವೆ. ಆದರೆ ಯಾವುದೇ ನೋಟೀಸ್ ನೀಡದೇ ಮನೆಗಳನ್ನು ಕೆಡವಿದ್ದಾರೆ. ಕೆಲ ಮಹಿಳೆಯರು ಗರ್ಭಿಣಿಯಾಗಿದ್ದಾರೆ. ಮನೆ ಕೆಡವಲು ಬಂದ ಅಧಿಕಾರಿಗಳು ಅವರ ಸ್ಥಿತಿಯ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸಲಿಲ್ಲ’ ಎಂದು ಸಂತ್ರಸ್ತ ನಿವಾಸಿಗಳು ಆರೋಪಿಸಿದ್ದಾರೆ.

‘ನಮಗೆ ಹಕ್ಕು ಪತ್ರ ಕೊಡುತ್ತೇವೆ ಎಂದು ಅನೇಕ ಜನಪ್ರತಿನಿಧಿಗಳು ಹೇಳಿದ್ದರು. ಆದರೆ ಮನೆ ಖಾಲಿ ಮಾಡಿ ಎಂದು ಯಾರೂ ಹೇಳಿಲ್ಲ. ಕಟ್ಟಿರುವ ಮನೆಯನ್ನು ಈಗ ಬೀಳಿಸಲಾಗಿದೆ. ಆದುದರಿಂದ ನಮ್ಮ ಮಕ್ಕಳ ಪ್ರಮಾಣ ಪತ್ರಗಳು, ಮನೆಯಲ್ಲಿರುವ ವಸ್ತುಗಳು ಹಾಳಾಗಿವೆ’ ಎಂದು ಸಂತ್ರಸ್ತರು ಹೇಳಿದ್ದಾರೆ.

‘ಗರ್ಭಿಣಿಯರು, ಮಕ್ಕಳು, ವೃದ್ಧರನ್ನು ಕರೆದುಕೊಂಡು ಚಳಿಯಲ್ಲಿ ಎಲ್ಲಿಗೆ ಹೋಗಬೇಕು. ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಅನೇಕರು ಬರುತ್ತಾರೆ. ಆದರೆ ಈಗ ಯಾರೂ ಬರುತ್ತಿಲ್ಲ. ಮನೆ ಕೆಡವುದನ್ನು ಪ್ರಶ್ನಿಸಿದಾಗ ಪೊಲೀಸರು ನಮಗೆ ಹೊಡೆದಿದ್ದಾರೆ’ ಎಂದು ಮನೆ ಕಳೆದುಕೊಂಡ ಸಂತ್ರಸ್ತರು ಹೇಳಿದರು.

 

ನನ್ನ ಕುಟುಂಬವು ಮೂರು ದಶಕಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದೆ. ಆದರೆ ನೆಲಸಮಗೊಳಿಸುವ ಮೊದಲು ನಮಗೆ ಯಾವುದೇ ನೋಟಿಸ್ ನೀಡಿಲ್ಲ. ಮುಂಜಾನೆ 4.30 ರ ಸುಮಾರಿಗೆ ಹಠಾತ್ತನೆ ಬಂದು ನಾವು ಮಲಗಿದ್ದಾಗ ಮನೆಗಳನ್ನು ಕೆಡವಲು ಪ್ರಾರಂಭಿಸಿದ್ದಾರೆ. ಅಧಿಕಾರಿಗಳು ನಮ್ಮನ್ನು ಬಲವಂತವಾಗಿ ಹೊರಹಾಕಿದರು. ನಮಗೆ ಕಂಬಳಿ ಅಥವಾ ಹೊದಿಕೆಗಳನ್ನು ತೆಗೆದುಕೊಳ್ಳಲೂ ಅನುಮತಿಸಲಿಲ್ಲ.

- ಸಾರಾ ಸೈಫ್ ಸೌಫಿಕ್, ಮನೆ ಕಳೆದುಕೊಂಡ ಸಂತ್ರಸ್ತರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News