ಪ್ರಿಯಾಂಕ್ ಖರ್ಗೆ ವಿರುದ್ಧ ದ್ವೇಷ ಭಾಷಣ ನಿಯಂತ್ರಣ ಕಾನೂನಿನಡಿ ಕ್ರಮವಾಗಲಿ: ಗೋವಿಂದ ಕಾರಜೋಳ
ಬೆಂಗಳೂರು: ನಿನ್ನೆ ವಿಧಾನ ಪರಿಷತ್ತಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರು ಕೇಂದ್ರ ಸಚಿವ ಅಮಿತ್ ಶಾ ಬಗ್ಗೆ ಅವಹೇಳಕಾರಿಯಾಗಿ ಮತ್ತು ಅಸಂಸದೀಯ ಪದಗಳನ್ನು ಬಳಸಿ ಮಾತನಾಡಿದ್ದು ಖಂಡನೀಯ. ಸರಕಾರ ಹೊಸದಾಗಿ ಜಾರಿಗೊಳಿಸಿರುವ ದ್ವೇಷ ಭಾಷಣ ನಿಯಂತ್ರಣ ಕಾನೂನಿನಡಿ ಪ್ರಿಯಾಂಕ್ ಖರ್ಗೆ ಮೊದಲನೇ ಅಪರಾಧಿ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಉತ್ತರ ಕರ್ನಾಟಕದ ವಿಜಯಪುರ, ರಾಯಚೂರು, ಕಲಬುರಗಿ, ಹೈದರಾಬಾದ್ ನಲ್ಲಿ ಒಂದು ನಾಣ್ಣುಡಿ ಇದೆ. ಸಣ್ಣ ಬಾಯೊಳಗೆ ದೊಡ್ಡ ಮಾತು (ಚೋಟಿ ಮುಹ್, ಬಡೀ ಬಾತ್) ಎಂಬರ್ಥವನ್ನು ಇದು ಕೊಡುತ್ತದೆ. ಈ ನಾಣ್ಣುಡಿ ಪ್ರಿಯಾಂಕ್ ಸಲುವಾಗಿಯೇ ಇದ್ದಂತಿದೆ ಎಂದು ಕಾರಜೋಳ ವ್ಯಂಗ್ಯವಾಡಿದರು.
ಪ್ರಿಯಾಂಕ್ ತಂದೆಯವರ ಹೆಸರು ಮಲ್ಲಿಕಾರ್ಜುನ ಇರದೇ ಹೋಗಿದ್ದರೆ, ಪ್ರಿಯಾಂಕ್ ಖರ್ಗೆಯನ್ನು ಯಾವೂರ ದಾಸಯ್ಯ ಎಂದು ಯಾರೂ ಕೇಳುತ್ತಿರಲಿಲ್ಲ. ಅವರ ತಂದೆಯವರಿಗಾಗಿ ಅವರಿಗೆ ಗೌರವ ಸಿಕ್ಕಿದೆ ಎಂದ ಕಾರಜೋಳ, ಚಿಕ್ಕವರಾದರೂ ಅವರು ತಿದ್ದಿಕೊಳ್ಳಬೇಕಿದೆ. ಬಾಯ್ತಪ್ಪಿ ಮಾತನಾಡಿದ್ದರೆ ಕ್ಷಮೆ ಕೇಳಿ ಅದನ್ನು ಸರಿಪಡಿಸಿಕೊಳ್ಳುವುದನ್ನು ಕಲಿಯಲಿ ಎಂದರು.
ನಾಲಿಗೆ ಹರಿಬಿಡುವುದರಲ್ಲಿ ಪ್ರಿಯಾಂಕ್ ನಂಬರ್ 1: ಛಲವಾದಿ ನಾರಾಯಣಸ್ವಾಮಿ
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಾಲಿಗೆ ಹರಿಬಿಡುವುದರಲ್ಲಿ ಪ್ರಿಯಾಂಕ್ ಖರ್ಗೆ ಇಡೀ ಕಾಂಗ್ರೆಸ್ ನಲ್ಲಿ ನಂಬರ್ 1. ಖರ್ಗೆ ಎಂಬ ಹೆಸರು ಪ್ರಿಯಾಂಕ್ ಪಕ್ಕದಲ್ಲಿ ಇಲ್ಲದೇ ಇರುತ್ತಿದ್ದರೆ ಅವರು ಮಂಡಲ ಪಂಚಾಯತ್ ಸದಸ್ಯರೂ ಆಗುತ್ತಿರಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಎಂಬುದೇ ವಂಶಪಾರಂಪರ್ಯದ ಸಂತತಿ. ಆ ಕಾರಣದಿಂದ ಹೀಗಾಗಿದೆ. ಸ್ವಾತಂತ್ರ್ಯ ಬಂದ ಬಳಿಕ, ಸಂವಿಧಾನ ಬಂದ ನಂತರ ರಾಜಪ್ರಭುತ್ವ ಇದ್ದುದು ಮುಗಿದು ಪ್ರಜಾಪ್ರಭುತ್ವ ಜಾರಿಯಲ್ಲಿರುತ್ತದೆ ಎಂದು ಡಾ. ಅಂಬೇಡ್ಕರ್ ಹೇಳಿದ್ದರು. ಮತಪೆಟ್ಟಿಗೆಯಿಂದ ರಾಜರು ಹುಟ್ಟುತ್ತಾರೆ ಎಂದು ಅವರು ಹೇಳಿದ್ದರು. ಈಗ ವಂಶಪಾರಂಪರ್ಯದಲ್ಲಿ ಆ ರಾಜಮನೆತನದ ಆಡಳಿತವೇ ಮತ್ತೆ ಬಂದ ಹಾಗೆ ಕಾಣುತ್ತಿದೆ ಎಂದು ಟೀಕಿಸಿದರು.
ಪ್ರಿಯಾಂಕ್ ಖರ್ಗೆ ಸದನದಲ್ಲಿ ಉತ್ತರ ಕೊಡಬೇಕಾದ ವೇಳೆ ಪರಾರಿಯಾಗುತ್ತಾರೆ. ಅವರ ಸಾಧನೆ ಶೂನ್ಯವಾದುದೇ ಇದಕ್ಕೆ ಕಾರಣ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ, ರಾಜ್ಯ ವಕ್ತಾರ ವೆಂಕಟೇಶ ದೊಡ್ಡೇರಿ, ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಉಪಸ್ಥಿತರಿದ್ದರು.