ಒಂದೆರಡು ದಿನಗಳಲ್ಲಿ ವಿವಿಧ ನಿಗಮ-ಮಂಡಳಿಗಳ ನೇಮಕಾತಿಯ ಎರಡನೇ ಪಟ್ಟಿ ಪ್ರಕಟ: ಸಿಎಂ ಡಿ.ಕೆ.ಶಿವಕುಮಾರ್
"ನೆಹರು ಅವರ ಚಿಂತನೆ, ತತ್ವ ಸಿದ್ಧಾಂತಗಳು ನಮಗೆ ದಾರಿ ದೀಪ"
Photo credit : X@DKShivakumar
ಬೆಂಗಳೂರು : ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ನೀಡುವ ಉದ್ದೇಶದಿಂದ ನಿಗಮ-ಮಂಡಳಿಗಳಿಗೆ ನೇಮಕಾತಿಯ ಮೊದಲ ಪಟ್ಟಿಯನ್ನು ಪ್ರಕಟಿಸಲಾಗಿದೆ. ಎರಡನೇ ಪಟ್ಟಿಯನ್ನು ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಬಳಿಕ ಬಾಕಿ ಉಳಿದಿರುವ ಸ್ಥಾನಗಳನ್ನು ಪಕ್ಷದ ಕಾರ್ಯಕರ್ತರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ್ ಜೋಡೋ ಯುವ ಸಂಘಕ್ಕೆ ಸದಸ್ಯತ್ವ ಅಭಿಯಾನ :
“ಮುಂದಿನ ದಿನಗಳಲ್ಲಿ ನೀವೆಲ್ಲರೂ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಭಾರತ್ ಜೋಡೋ ಸಂಘಗಳಿಗೆ ಸದಸ್ಯರನ್ನು ನೇಮಕ ಮಾಡಬೇಕು. ಗ್ಯಾರಂಟಿ ಸಮಿತಿಗೆ 40 ಸಾವಿರ ಜನರನ್ನು ನೇಮಕ ಮಾಡಿದ್ದು, ಇನ್ನೂ 20 ಸಾವಿರ ಸದಸ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ನಮ್ಮ ಸರ್ಕಾರದ ಐದು ಗ್ಯಾರಂಟಿಗಳು ಪ್ರಮುಖವಾಗಿದ್ದು, ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿಯಾಗಿದೆ. ಇಡೀ ದೇಶ ನಮ್ಮ ಗ್ಯಾರಂಟಿ ಯೋಜನೆಗಳನ್ನು ಗಮನಿಸುತ್ತಿದೆ” ಎಂದರು.
“ಎಸ್ಐಆರ್ ವಿಚಾರವಾಗಿ ಪಕ್ಷದ ವತಿಯಿಂದ ವಿಶೇಷ ಆ್ಯಪ್ ಸಿದ್ಧಪಡಿಸಲಾಗಿದೆ. ಮತದಾರರ ಪಟ್ಟಿಯಿಂದ ಕೈಬಿಡಲಾಗಿರುವ ಅರ್ಹ ಮತದಾರರ ಹೆಸರುಗಳನ್ನು ಮತ್ತೆ ಸೇರ್ಪಡೆಗೊಳಿಸಲು ನಾವು ಆಲೋಚಿಸಬೇಕು ಮತ್ತು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದೇವೆ” ಎಂದು ಹೇಳಿದರು.
ದೇಶದ ಕೈಗಾರಿಕಾ, ಹಸಿರು ಹಾಗೂ ಕ್ಷೀರ ಕ್ರಾಂತಿಗೆ ನೆಹರು ಬುನಾದಿ ಹಾಕಿದರು :
“ನಮ್ಮ ವಿಧಾನಸೌಧಕ್ಕೆ ಶಂಕುಸ್ಥಾಪನೆ ಮಾಡಿದವರು ನೆಹರು. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಜವಾಬ್ದಾರಿ ವಹಿಸಿಕೊಳ್ಳಲು ಅವರನ್ನು ಕಾನೂನು ಸಚಿವರನ್ನಾಗಿ ಮಾಡಿದವರು ನೆಹರು. ದೇಶದಲ್ಲಿ ಕೈಗಾರಿಕಾ ಕ್ರಾಂತಿ, ಹಸಿರು ಕ್ರಾಂತಿ ಹಾಗೂ ಕ್ಷೀರ ಕ್ರಾಂತಿಗೆ ಅವರು ಬುನಾದಿ ಹಾಕಿದರು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಮಕ್ಕಳೇ ದೇಶದ ಸಂಪತ್ತು. ಅವರ ಶಿಕ್ಷಣವೇ ದೇಶಕ್ಕೆ ನಿಜವಾದ ಹೂಡಿಕೆ ಎಂದು ನೆಹರು ಪ್ರತಿಪಾದಿಸಿದ್ದರು. ಮಕ್ಕಳ ಕನಸುಗಳಲ್ಲಿಯೇ ದೇಶದ ಭವಿಷ್ಯ ಅಡಗಿದೆ” ಎಂದು ಅಭಿಪ್ರಾಯಪಟ್ಟರು.
“ಮಕ್ಕಳು ಈ ದೇಶದ ಭವಿಷ್ಯ. ಹೀಗಾಗಿ ನನ್ನ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಿ ಎಂದು ನೆಹರು ಕರೆ ನೀಡಿದ್ದರು. ಅವರ ಆಶಯದಂತೆ ನಾವೆಲ್ಲರೂ ಇಂದು ಮಕ್ಕಳ ದಿನ ಆಚರಿಸುತ್ತಿದ್ದೇವೆ. ದೇಶದ ಭವಿಷ್ಯ ಗಟ್ಟಿಯಾಗಿರಬೇಕಾದರೆ ಪ್ರತಿಯೊಂದು ಮನೆಯಲ್ಲೂ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ನೆಹರು ಅವರಿಗೆ ಮಕ್ಕಳನ್ನು ಕಂಡರೆ ಅಪಾರ ಪ್ರೀತಿ. ‘ನಾಳೆ ನಿಮ್ಮದು’ ಎಂಬ ಸಂದೇಶವನ್ನು ಅವರು ಮಕ್ಕಳಿಗೆ ನೀಡಿದ್ದರು” ಎಂದರು.
“ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನೆಹರು ಅವರು ತಮ್ಮ ಪುತ್ರಿ ಇಂದಿರಾ ಗಾಂಧಿ ಅವರಿಗೆ ಬರೆದ ಪತ್ರಗಳಲ್ಲಿನ ವಿಚಾರಗಳನ್ನು ಎಲ್ಲರೂ ಓದಬೇಕು. ಅಂಬೇಡ್ಕರ್ ಅವರ ನೇತೃತ್ವದಲ್ಲಿ ದೇಶದ ಸಂವಿಧಾನಕ್ಕೆ ಅಡಿಪಾಯ ಹಾಕಲಾಗಿದ್ದು, ಅದರ ಅಡಿಯಲ್ಲಿಯೇ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ನೆಹರು ಅವರು ದೇಶ ಛಿದ್ರವಾಗಬಾರದು ಎಂಬ ಉದ್ದೇಶದಿಂದ ಅಂದಿನ 550ಕ್ಕೂ ಹೆಚ್ಚು ರಾಜಸಂಸ್ಥಾನಗಳನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದರು. ಅವರ ಕೊಡುಗೆ ನಮಗೆ ಶಕ್ತಿ ನೀಡಿದೆ” ಎಂದು ತಿಳಿಸಿದರು.
ನೆಹರು ಅವರ ಚಿಂತನೆಗಳು ನಮಗೆ ದಾರಿದೀಪ :
“ನೆಹರು ಅವರ ಪಂಚವಾರ್ಷಿಕ ಯೋಜನೆಗಳ ಜತೆಗೆ ಎಚ್ಎಂಟಿ, ಐಟಿಐ, ಇಸ್ರೋ ಸೇರಿದಂತೆ ಹಲವು ಸಾರ್ವಜನಿಕ ಉದ್ದಿಮೆಗಳು ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಅವರ ದೂರದೃಷ್ಟಿ ಕಾರಣವಾಗಿದೆ. ಇವುಗಳ ಮೂಲಕ ದೇಶದ ಅಭಿವೃದ್ಧಿಗೆ ಬುನಾದಿ ಹಾಕಿದ ಅವರ ಕೊಡುಗೆಯನ್ನು ಕರ್ನಾಟಕದ ಜನತೆ ಮರೆಯಲು ಸಾಧ್ಯವಿಲ್ಲ. ಅವರ ದೂರದೃಷ್ಟಿ ಹಾಗೂ ತ್ಯಾಗವನ್ನು ಇಡೀ ವಿಶ್ವ ಶ್ಲಾಘಿಸುತ್ತದೆ. ಅವರ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡಬೇಕು. ದೇಶ ಈ ಮಟ್ಟಕ್ಕೆ ಪ್ರಗತಿ ಸಾಧಿಸಲು ನೆಹರು ಅವರ ಮಾರ್ಗದರ್ಶನ ಮಹತ್ವದ್ದಾಗಿದೆ. ಅವರ ಚಿಂತನೆಗಳು ಹಾಗೂ ತತ್ವಸಿದ್ಧಾಂತಗಳು ನಮಗೆ ದಾರಿದೀಪವಾಗಿವೆ” ಎಂದರು.
“ನೆಹರು ಕುಟುಂಬ ತಮ್ಮ ಆಸ್ತಿಗಳನ್ನು ದೇಶಕ್ಕಾಗಿ ತ್ಯಾಗ ಮಾಡಿದೆ. ದೊಡ್ಡ ಕುಟುಂಬದಿಂದ ಬಂದಿದ್ದರೂ ನೆಹರು ಅವರು ಅಲಹಾಬಾದ್ ಪುರಸಭೆಯ ಅಧ್ಯಕ್ಷರಾಗಿ ಸ್ಥಳೀಯ ಸಂಸ್ಥೆಯ ಮೂಲಕ ರಾಜಕೀಯ ಜೀವನ ಆರಂಭಿಸಿ, ದೇಶದ ಪ್ರಧಾನಮಂತ್ರಿಯ ಹುದ್ದೆಗೇರಿದರು. ಅವರಂತೆ ಕೆಂಗಲ್ ಹನುಮಂತಯ್ಯ, ರಾಜಗೋಪಾಲಾಚಾರಿ, ಬಿ.ಡಿ. ಜತ್ತಿ ಸೇರಿದಂತೆ ಅನೇಕ ಮಹನೀಯರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯವಾಗಿ ಬೆಳೆದವರು. ಎಲ್ಲರೂ ಶಾಸಕರಾಗಿಯೇ ರಾಜಕೀಯ ಆರಂಭಿಸಬೇಕೆಂದಿಲ್ಲ. ನಾವೆಲ್ಲರೂ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದವರು. ಸಿದ್ದರಾಮಯ್ಯ ಅವರು ತಾಲ್ಲೂಕು ಬೋರ್ಡ್ ಸದಸ್ಯರಾಗಿದ್ದರು. ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಒಂದೆರಡಲ್ಲ, ಸಾವಿರಾರು ಕೆಲಸಗಳನ್ನು ಮಾಡಿದ್ದಾರೆ” ಎಂದು ಹೇಳಿದರು.
ನೆಹರು ದೂರದೃಷ್ಟಿಯೇ ಆಧುನಿಕ ಭಾರತದ ಅಡಿಪಾಯ :
ಇದಕ್ಕೂ ಮೊದಲು ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, “ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ಕ್ಷೇತ್ರಗಳಲ್ಲಿ ನೆಹರು ಅವರ ದೂರದೃಷ್ಟಿಯಿಂದ ರೂಪಿಸಲಾದ ಯೋಜನೆಗಳು ಇಂದಿಗೂ ದೇಶದ ಅಭಿವೃದ್ಧಿಗೆ ನೆರವಾಗುತ್ತಿವೆ. ಪಂಚವಾರ್ಷಿಕ ಯೋಜನೆಗಳ ಮೂಲಕ ಉದ್ಯೋಗ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದರು. 1955ರಲ್ಲಿಯೇ ಕಂಪ್ಯೂಟರ್ ಯುಗದ ಬಗ್ಗೆ ಚಿಂತನೆ ನಡೆಸಿದ್ದ ಅವರ ದೂರದೃಷ್ಟಿಯನ್ನು ಮರೆಯಲು ಸಾಧ್ಯವಿಲ್ಲ. ಮಹಿಳೆಯರ ರಕ್ಷಣೆಗಾಗಿ ವರದಕ್ಷಿಣೆ ನಿಷೇಧ ಕಾನೂನು ಜಾರಿಗೆ ತಂದ ಕೊಡುಗೆಯನ್ನೂ ಸ್ಮರಿಸಬೇಕು. ತುಂಗಭದ್ರಾ ಅಣೆಕಟ್ಟು ನಿರ್ಮಾಣಕ್ಕೆ ಅನುದಾನ ನೀಡಿದ್ದೂ ಸೇರಿದಂತೆ ಕರ್ನಾಟಕದ ಅಭಿವೃದ್ಧಿಗೂ ಅವರ ಕೊಡುಗೆ ಇದೆ” ಎಂದರು.