ಬೆಂಗಳೂರು : ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಬೇಕು ಎಂದು ಮಾನವ ಚಾರಿಟೀಸ್‍ನ ಕಾರ್ಯದರ್ಶಿ ರಾಜೇಂದ್ರ ಕುಲಕರ್ಣಿ ಹೇಳಿದ್ದಾರೆ.

ಶುಕ್ರವಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಎಂಟನೇ ವರ್ಷದ ‘ಮಾನವ ರತ್ನ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸರಕಾರದ ಮಿತಿಗಳ ನಡುವೆ ನಾಗರಿಕ ಸಮಾಜ ಮತ್ತು ಸ್ವಯಂಸೇವಾ ಸಂಸ್ಥೆಗಳು ಕೈಜೋಡಿಸಿದಾಗ ಮಾತ್ರ ಸಮಾಜದ ಎಲ್ಲ ವರ್ಗಗಳಿಗೂ ನೆರವು ತಲುಪಿಸಲು ಸಾಧ್ಯ. ಆ ನಿಟ್ಟಿನಲ್ಲಿ ಮಾನವ ಚಾರಿಟೀಸ್ 30 ವರ್ಷಗಳಿಂದ ಆರೋಗ್ಯ, ಶಿಕ್ಷಣ, ಸಬಲೀಕರಣ, ಸಮುದಾಯ ಸೇವೆ ಹಾಗೂ ಪರಿಸರ ಕ್ಷೇತ್ರಗಳಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಬೌದ್ಧಿಕ ವಿಕಲಚೇತನ ಮಕ್ಕಳಿಗಾಗಿ ಮಾನವ ವಿಶೇಷ ಶಾಲೆ ಮತ್ತು ಪುನರ್ವಸತಿ ಕೇಂದ್ರವನ್ನು ನಡೆಸಲಾಗುತ್ತಿದೆ. ಪ್ರಸ್ತುತ 65 ಮಕ್ಕಳು ಸಂಸ್ಥೆಯಲ್ಲಿದ್ದು, ಅವರಿಗೆ ಶಿಕ್ಷಣದ ಜತೆಗೆ ವಿವಿಧ ಕೌಶಲ ತರಬೇತಿಗಳನ್ನು ನೀಡಲಾಗುತ್ತಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರ ಸಾಮಥ್ರ್ಯಕ್ಕೆ ಅನುಗುಣವಾಗಿ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತಿದೆ ಎಂದು ರಾಜೇಂದ್ರ ಕುಲಕರ್ಣಿ ತಿಳಿಸಿದರು.

ವಿಕಲಚೇತನರು ಮತ್ತು ಬೌದ್ಧಿಕ ವಿಕಲಚೇತನ ಮಕ್ಕಳ ಬಗ್ಗೆ ಸಮಾಜದ ದೃಷ್ಟಿಕೋನ ಬದಲಾಗಬೇಕಿದೆ. ಇಂತಹ ಮಕ್ಕಳನ್ನು ಸ್ವೀಕರಿಸಲು ಹಲವರು ಹಿಂಜರಿಯುತ್ತಾರೆ. ಪೋಷಕರೂ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟ ಎದುರಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಸಮಾಜದ ಕಳಕಳಿ ಹೊಂದಿರುವವರು ಮುಂದೆ ಬಂದು ನೆರವಾಗಬೇಕು. ಸಮಾಜ ಸೇವೆ ಎಂಬುದು ಯಾರೋ ಮಾಡುವ ಕೆಲಸವಲ್ಲ, ಅದು ಪ್ರತಿಯೊಬ್ಬರ ಜವಾಬ್ದಾರಿ ಎಂಬ ಮನೋಭಾವ ಬೆಳೆಯಬೇಕು ಎಂದು ಅವರು ತಿಳಿಸಿದರು.

ಸರಕಾರಕ್ಕೆ ತನ್ನದೇ ಆದ ಮಿತಿಗಳಿದ್ದು, ಎಲ್ಲರ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಸ್ವಯಂಸೇವಾ ಸಂಸ್ಥೆಗಳು ಮತ್ತು ಸಮಾಜಮುಖಿ ವ್ಯಕ್ತಿಗಳು ನೆರವಿಗೆ ಬರಬೇಕು. ನಮ್ಮ ಸುತ್ತಮುತ್ತಲಿನ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಬೆಳೆದರೆ ಸಮಾಜದಲ್ಲಿ ಯಾರೂ ನಿರ್ಲಕ್ಷಿತರಾಗುವುದಿಲ್ಲ. ಪರಸ್ಪರ ಸಹಕಾರದ ಮೂಲಕ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ರಾಜೇಂದ್ರ ಕುಲಕರ್ಣಿ ಹೇಳಿದರು.

ಕಾರ್ಯಕ್ರಮದಲ್ಲಿ ಉಪಲೋಕಾಯುಕ್ತ ಸುಭಾಷ್‌ ಬಿ.ಅಡಿ, ಶ್ರೀಪಾದರಾಯ ಮಠದ ಹಿಸ್ ಹೋಲಿನೆಸ್ ಸ್ವಾಮೀಜಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor