‘ಬಸವಮಂಟಪ’ ಕೃತಿ ಮುಟ್ಟುಗೋಲು ಹಾಕಿ, ವಿಡಿಯೋ ತೆಗೆದುಹಾಕಿ: ಸಚಿವ ಈಶ್ವರ್ ಖಂಡ್ರೆ ಆಗ್ರಹ
ಬಸವಣ್ಣ, ಲಿಂಗಾಯತ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ; ಲೇಖಕ ರವಿ ಹಂಜ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಒತ್ತಾಯ
ಬೆಂಗಳೂರು: ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಹಾಗೂ ಲಿಂಗಾಯತ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎನ್ನಲಾದ ಲೇಖಕ ರವಿ ಹಂಜ್ ಅವರ ‘ಬಸವಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಸಾಮಾಜಿಕ ಜಾಲತಾಣಗಳಿಂದ ಈ ಸಂಬಂಧದ ಎಲ್ಲ ವಿಡಿಯೋಗಳನ್ನು ತೆಗೆದುಹಾಕಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ್ ಬಿ.ಖಂಡ್ರೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಅವರು, ಸಚಿವನಾಗಿ ತಾವು ಒಂದು ಕೃತಿಯನ್ನು ಮುಟ್ಟುಗೋಲು ಹಾಕುವಂತೆ ಬಹಿರಂಗವಾಗಿ ಒತ್ತಾಯಿಸಬಾರದು. ಆದರೆ ಇಡೀ ಲಿಂಗಾಯತ ಸಮುದಾಯ ಹಾಗೂ ವಿಶ್ವಗುರು ಬಸವಣ್ಣನವರ ಅನುಯಾಯಿಗಳಿಗೆ ಘಾಸಿ ಉಂಟುಮಾಡುವ ರೀತಿಯಲ್ಲಿ ಆಧಾರರಹಿತ ಆರೋಪಗಳನ್ನು ಮಾಡಿರುವ ರವಿ ಹಂಜ್ ಅವರ ಕೃತಿ ಸಮಾಜದ ಸ್ವಾಸ್ಥ್ಯವನ್ನು ಕದಡುವಂತಿದೆ. ಆದ್ದರಿಂದ ಈ ಕೃತಿಯನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳುವಂತೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
ಸಂವಿಧಾನದತ್ತವಾದ ವಾಕ್ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಾವು ಗೌರವ ನೀಡುತ್ತೇನೆ. ಆದರೆ ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ ಎಂದು ಬಣ್ಣಿಸುವುದು ಹಾಗೂ ಬಿಜ್ಜಳನ ಖಜಾನೆಯನ್ನು ದುರುಪಯೋಗಪಡಿಸಿಕೊಂಡು ಶರಣ ದಾಸೋಹ ಮಾಡಿದರು ಎಂಬಂತಹ ಅವಹೇಳನಕಾರಿ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಈ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಈ ಸಂಬಂಧ ರವಿ ಹಂಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ವಿಡಿಯೋಗಳನ್ನು ಕೂಡಲೇ ತೆಗೆದುಹಾಕಬೇಕು ಎಂದು ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ಲಿಂಗಾಯತರನ್ನು ‘ಲಿಂಗಾಹತರು’ ಎಂದು ಕರೆದಿರುವುದು ಪ್ರಚೋದನಕಾರಿ ಹೇಳಿಕೆಯಾಗಿದೆ. ಇದು ವಿಶ್ವದಾದ್ಯಂತ ಇರುವ ಬಸವಭಕ್ತರ ಮನಸ್ಸಿಗೆ ತೀವ್ರ ನೋವುಂಟುಮಾಡಿದ್ದು, ಲಿಂಗಾಯತ ಸಮುದಾಯಕ್ಕೂ ವೇದನೆ ಉಂಟುಮಾಡಿದೆ. ಭಾವನಾತ್ಮಕ ವಿಚಾರಗಳ ಕುರಿತು ಯಾವುದೇ ಸಂಶೋಧನೆ ನಡೆಸದೆ ಸ್ವಯಂಘೋಷಿತ ಸಂಶೋಧಕರೆಂದು ಮಾತನಾಡುತ್ತಿರುವ ವ್ಯಕ್ತಿಯ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಕಾರಣಕ್ಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.