ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಅಕ್ರಮ ಆರೋಪ: ರಾಜ್ಯಪಾಲರಿಗೆ ದೂರು ಸಲ್ಲಿಕೆ
ಬೆಂಗಳೂರು : ಆರೋಗ್ಯ ಇಲಾಖೆಯ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ (ಕೆಎಸ್‌ಎಂಎಸ್‌ಸಿಎಲ್) ಟೆಂಡರ್ ಅಕ್ರಮ ಮತ್ತು ಅಧಿಕಾರಿಗಳ ಕರ್ತವ್ಯ ಲೋಪ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯಪಾಲೆ ಡಾ.ಸುಧಾ ಯಾದವ್ ಅವರಿಗೆ ದೂರು ಸಲ್ಲಿಸಲಾಗಿದೆ.
ಈ ಸಂಬಂಧ ಬುಧವಾರ ವಕೀಲ ಎ.ಸಿ.ವಿಷ್ಣುಪ್ರಸಾದ್ ಎಂಬುವರು 6 ಪುಟಗಳ ದೂರು ಸಲ್ಲಿಸಿದ್ದು, ಎಲ್ಲ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿರುವುದು, ಕಂಪೆನಿಗಳಿಂದ ಕಮಿಷನ್ ವಸೂಲಿ, ಕಿಕ್‌ಬ್ಯಾಕ್, ಅಧಿಕಾರಿಗಳ ಕರ್ತವ್ಯ ಲೋಪ, ವಿವಿಧ ಕಂಪೆನಿಗಳೊಂದಿಗೆ ಪ್ರತ್ಯೇಕ ದರ ನಿಗದಿ, ಪಾಲುದಾರಿಕೆ ಹೆಸರಿನಲ್ಲಿ ಟೆಂಡರ್‌ಗಳಲ್ಲಿ ಭಾಗವಹಿಸುವಂತೆ ಮಾಡುವುದು, ಸಚಿವರ ಸಂಬಂಧಿಕರಿಂದ ಟೆಂಡರ್ ಮೇಲೆ ನಿಯಂತ್ರಣ, ಸಚಿವರ ಹೆಸರು ಬಳಸಿಕೊಂಡು ಹಣ ವಸೂಲಿ ಹಾಗೂ ಉಪಕರಣದ ಖರೀದಿಗೆ ಪ್ರತ್ಯೇಕ ಕಮಿಷನ್ ನಿಗದಿಪಡಿಸುವ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ನಿಗಮದ ಲೋಪದೋಷಗಳ ಬಗ್ಗೆ ಸ್ವತಃ ಆರೋಗ್ಯ ಸಚಿವ ಯು.ಟಿ ಖಾದರ್, ಆಯುಕ್ತರಿಗೆ ಬರೆದಿರುವ ಪತ್ರ ಪತ್ರದಲ್ಲಿ ನಿಗಮದ ಕಾರ್ಯಲೋಪಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಹಲವು ವರ್ಷಗಳಿಂದ ವೈದ್ಯಕೀಯ ಉಪಕರಣಗಳ ಸರಬರಾಜು ಮಾಡುತ್ತಿರುವ ಖಾಸಗಿ ಮಧ್ಯವರ್ತಿಯೊಬ್ಬರು, ನಿಗಮದ ಟೆಂಡರ್ ಪ್ರಕ್ರಿಯೆಯಲ್ಲಿ ಅನಧಿಕೃತವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.