ಬೆಂಗಳೂರು : ಶಾಲಾ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಜನರೇಟಿವ್ ಎಐ (ಜೆನ್‍ಎಐ) ಬಳಕೆಯಿಂದ ಮಕ್ಕಳ ಕಲಿಕಾ ಸಾಮರ್ಥ್ಯ, ಮಾನಸಿಕ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ, ಕರ್ನಾಟಕದಲ್ಲಿ ಶಾಲಾ ಶಿಕ್ಷಣದಲ್ಲಿ ಎಐ ಬಳಕೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.

ಮಂಗಳವಾರ ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ಗೆ ಪತ್ರ ಬರೆದಿರುವ ಅವರು, ಎಐ ಬಳಕೆಯಿಂದ ವಿದ್ಯಾರ್ಥಿಗಳು ಸ್ವತಂತ್ರವಾಗಿ ಯೋಚಿಸಿ ಕಲಿಯುವ ಬದಲು ಉತ್ತರಗಳನ್ನು ನೇರವಾಗಿ ಪಡೆಯುವ ಪ್ರವೃತ್ತಿ ಹೆಚ್ಚಾಗಬಹುದು. ಶಿಕ್ಷಕರು ಪಾಠ ಹಾಗೂ ಪರೀಕ್ಷೆಗಳನ್ನು ಜೆನ್‍ಎಐ ಮೂಲಕ ಸಿದ್ಧಪಡಿಸುವುದು, ವಿದ್ಯಾರ್ಥಿಗಳು ಎಐ ಮೂಲಕ ಉತ್ತರಿಸುವುದು ಮತ್ತು ಅದೇ ತಂತ್ರಜ್ಞಾನದಿಂದ ಮೌಲ್ಯಮಾಪನ ನಡೆಸುವುದು ಕಲಿಕೆಯ ಮೂಲ ಪ್ರಕ್ರಿಯೆಯನ್ನೇ ಬದಿಗೊತ್ತಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಜೆನ್‍ಎಐ ಮೇಲೆ ಅತಿಯಾದ ಅವಲಂಬನೆ ವಿದ್ಯಾರ್ಥಿಗಳ ಅರಿವಿನ ಸಾಮಥ್ರ್ಯ ಕುಸಿತಕ್ಕೆ ಕಾರಣವಾಗಬಹುದು. ಶಾಲೆಗಳಲ್ಲಿ ಎಐ ಬಳಕೆಯಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪರಸ್ಪರ ಎಐ ಬಳಸಿದ್ದಾರೆ ಎಂಬ ಅನುಮಾನಕ್ಕೆ ಒಳಗಾಗುವ ಮೂಲಕ, ಪರಸ್ಪರ ನಂಬಿಕೆಯ ವಾತಾವರಣಕ್ಕೂ ಧಕ್ಕೆಯಾಗಬಹುದು. ಇದರ ಜೊತೆಗೆ, ಯುವಜನರು ಎಐ ಆಧಾರಿತ ಸಂವಾದಾತ್ಮಕ ವ್ಯವಸ್ಥೆಗಳೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸುವ ಸಾಧ್ಯತೆ ಹಾಗೂ ಅದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನಿರಂಜನಾರಾಧ್ಯ ವಿವರಿಸಿದ್ದಾರೆ.

ವಾಣಿಜ್ಯ ಎಐ ವೇದಿಕೆಗಳು ಬಳಕೆದಾರರನ್ನು ಹೆಚ್ಚು ಸಮಯ ತಮ್ಮೊಂದಿಗೆ ತೊಡಗಿಸಿಕೊಳ್ಳುವಂತೆ ವಿನ್ಯಾಸಗೊಳ್ಳುವ ಸಾಧ್ಯತೆ ಇರುವುದರಿಂದ ವ್ಯಸನದ ಅಪಾಯವೂ ಇದೆ. ಶಿಕ್ಷಣದಲ್ಲಿ ಎಐ ಬಳಕೆಯನ್ನು ತಕ್ಷಣ ವಿರಾಮಗೊಳಿಸಿ, ಅದರ ಸುರಕ್ಷಿತ ಬಳಕೆಯ ಕ್ಷೇತ್ರಗಳನ್ನು ಕಠಿಣವಾಗಿ ಪರೀಕ್ಷಿಸಿದ ನಂತರವೇ ಸೀಮಿತ ಪ್ರಮಾಣದಲ್ಲಿ ಪ್ರಯೋಗ ನಡೆಸಬೇಕು. ವಿಶೇಷವಾಗಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಎಐ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ಶಾಲೆಗಳಲ್ಲಿ ಅವರಿಗೆ ಸಾಧನ ಪ್ರವೇಶ ನೀಡಬಾರದು ಎಂದು ಅವರು ಹೇಳಿದ್ದಾರೆ.

16 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಹಾಗೂ ವಯಸ್ಕರಿಗೆ ನಿರ್ದಿಷ್ಟ ಬಳಕೆಯ ಸಂದರ್ಭಗಳಲ್ಲಿ ಮಾತ್ರ AI ಪೈಲಟ್ ಯೋಜನೆಗಳನ್ನು ಕೈಗೊಳ್ಳಬೇಕು. ಮಕ್ಕಳಿಗೆ ಮನೆಯಲ್ಲಿ ಡಿಜಿಟಲ್ ಸಾಧನಗಳ ಮೂಲಕ ಕಡ್ಡಾಯವಾಗಿ ಮನೆಕೆಲಸ ನೀಡುವುದನ್ನು ಹಾಗೂ ಪೋಷಕರು ಮಕ್ಕಳಿಗೆ ಸಾಧನ ಒದಗಿಸುವಂತೆ ಒತ್ತಾಯಿಸುವುದನ್ನೂ ನಿಲ್ಲಿಸಬೇಕು. ಎಐ ಸೇರಿದಂತೆ ಯಾವುದೇ ತಂತ್ರಜ್ಞಾನವನ್ನು ಶಾಲೆಗಳಲ್ಲಿ ಪರಿಚಯಿಸುವ ಮೊದಲು ಶಿಕ್ಷಕರಿಗೆ ‘ಕ್ರಿಟಿಕಲ್ ಡಿಜಿಟಲ್ ಸಾಕ್ಷರತೆ’ ತರಬೇತಿ ನೀಡಬೇಕು ಎಂದು ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor