ವಿಜಯಪುರ ವಿಮಾನ ನಿಲ್ದಾಣ: ಪರಿಸರ ಅನುಮತಿಗೆ ಕೋರಿ ರಾಜ್ಯದ ಪತ್ರ

Update: 2026-08-01 21:21 IST

ಸಾಂದರ್ಭಿಕ ಚಿತ್ರ | Image by 4045 on Magnific

ಬೆಂಗಳೂರು : ಪರಿಸರ ಸಂಬಂಧಿ ಅನುಮತಿ ಸಿಕ್ಕಿದ ಬಳಿಕ ಮುಂದಿನ ಪ್ರಕ್ರಿಯೆಗಳು ಮೂರು ತಿಂಗಳಲ್ಲಿ ಪೂರ್ಣಗೊಂಡರೆ ವಿಜಯಪುರ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಬಹುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಅರಣ್ಯ ಮತ್ತು ಪರಿಸರ ಸಚಿವಾಲಯದ ಪೂರ್ವಾನುಮತಿ ಪಡೆಯದೆ ಈಗಾಗಲೇ ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಇರುವ ಮನವಿಗಳಿಗೆ ಒಪ್ಪಿಗೆ ಕೊಡಲು ಯಾವ ಅಡ್ಡಿಯೂ ಇಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪಿನಲ್ಲಿ ಹೇಳಿದೆ. ಆದುದರಿಂದ, ವಿಜಯಪುರ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಬಹುಕಾಲದಿಂದ ನನೆಗುದಿಯಲ್ಲಿರುವ ರಾಜ್ಯದ ಮನವಿಯನ್ನು ಆದಷ್ಟು ಬೇಗ ಪುರಸ್ಕರಿಸಬೇಕು ಎಂದು ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್‍ಐಐಡಿಸಿ) ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯೆಲ್, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಈ ಸಂಬಂಧವಾಗಿ ಪತ್ರ ಬರೆಯುವಂತೆ ಸಚಿವ ಎಂ.ಬಿ.ಪಾಟೀಲ್ ಸೂಚನೆ ನೀಡಿದ್ದರು. ಪರಿಸರ ಇಲಾಖೆಯ ಪೂರ್ವಾನುಮತಿ ಪಡೆಯದೆ ಕೈಗೆತ್ತಿಕೊಂಡಿರುವ ಯೋಜನೆಗಳ ವಿರುದ್ಧ ವನಶಕ್ತಿ ಸಂಘಟನೆಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠವು, ಸಾರ್ವಜನಿಕ ಹಿತವನ್ನು ಪರಿಗಣಿಸಿ, ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳಿಗೆ ಪೂರ್ವಾನುಮತಿಯಿಂದ ಶಾಶ್ವತ ವಿನಾಯಿತಿ ನೀಡಿ ಜು.29ರಂದು ತೀರ್ಪು ನೀಡಿದೆ.

ಇದರಿಂದಾಗಿ, ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಎದುರಾಗಿದ್ದ ಸಂಕಷ್ಟ ಬಗೆಹರಿದಿದೆ. ಖುಷ್ಬೂ ಅವರು ತಮ್ಮ ಪತ್ರದಲ್ಲಿ, ಈಗಾಗಲೇ ಉಳಿದ ಅಗತ್ಯ ಮಾನದಂಡಗಳಿಗೆ ಅನುಗುಣವಾಗಿ ವಿಜಯಪುರ ವಿಮಾನ ನಿಲ್ದಾಣ ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ಇದಕ್ಕಾಗಿ 618 ಕೋಟಿ ರೂ.ವಿನಿಯೋಗಿಸಲಾಗಿದೆ. ಇದರ ಶೀಘ್ರ ಕಾರ್ಯಾರಂಭದಿಂದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಕೃಷಿ ಉತ್ಪನ್ನಗಳ ರಫ್ತು, ಪ್ರವಾಸೋದ್ಯಮ, ಕೈಗಾರಿಕಾ ಹೂಡಿಕೆಗೆ ನೆರವಾಗಲಿದೆ ಎಂದು ವಿವರಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News