ಇಂದು ಶೇಖರ್

ಬೆಂಗಳೂರು: ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಕುಟುಂಬದ ಏಳು ಮಂದಿಯನ್ನು ಕೊಲೆ ಮಾಡಿರುವ ದಾರುಣ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಈ ಸಂಬಂಧ ಶ್ರೀರಾಮಪುರ ಠಾಣೆ ಪೊಲೀಸರು ಇಂದುಶೇಖರ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಒಂದು ವಾರದ ಹಿಂದಿನಿಂದ ಒಬ್ಬೊಬ್ಬರನ್ನೇ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಶ್ರೀರಾಮಪುರದ ನಿವಾಸಿಗಳಾದ ರೂಪವತಿ, ಆಕೆಯ ಮಗಳು ಸುನೀತಾ, ಪುತ್ರರಾದ ಶಿವಕುಮಾರ್, ಶಂಕರ್, ಸೊಸೆಯಂದಿರಾದ ದಿವ್ಯಾ, ನಳಿನ ಹಾಗೂ ಏಳು ವರ್ಷದ ಮೊಮ್ಮಗ ಪುನೀತ್ ಕೊಲೆಗೀಡಾದವರು.

 ಘಟನೆ ವಿವರ 

ಇಂದುಶೇಖರ್ ಹಾಗೂ ಸುನೀತಾ ಎರಡು ದಶಕಗಳ ಹಿಂದೆ ವಿವಾಹವಾಗಿದ್ದರು. ಆದರೆ, ಅವರ ನಡುವೆ ಸದಾ ದಾಂಪತ್ಯ ಕಲಹ ನಡೆಯುತ್ತಿತ್ತು. ಹಲವು ಬಾರಿ ರಾಜಿ ಸಂಧಾನ ನಡೆಸಿದರೂ ಸಮಸ್ಯೆ ಬಗೆಹರಿದಿರಲಿಲ್ಲ. ಅಲ್ಲದೆ, ಪತ್ನಿ ಸುನೀತಾಳ ತಾಯಿ ಹಾಗೂ ಸಹೋದರರು ಯಾವಾಗಲೂ ಆಕೆಯ ಪರವಾಗಿಯೇ ನಿಲ್ಲುತ್ತಾರೆ ಎಂಬ ಅಸಮಾಧಾನ ಇಂದುಶೇಖರ್ನಲ್ಲಿತ್ತು ಎನ್ನಲಾಗಿದೆ.

ಪೂರ್ವನಿಯೋಜಿತ ಸಂಚಿನಂತೆ ಮೊದಲು ಪತ್ನಿ ಸುನೀತಾಳನ್ನು ರುಬ್ಬುವ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಬಳಿಕ ರುಬ್ಬುಗುಂಡನ್ನು ತೊಳೆದು ಮನೆಯಲ್ಲಿಟ್ಟಿದ್ದಾನೆ. ನಂತರ ಮೃತದೇಹವನ್ನು ನಂದಿ ಬೆಟ್ಟದ ತಪ್ಪಲಿಗೆ ತೆಗೆದುಕೊಂಡು ಹೋಗಿ ಎಸೆದಿದ್ದಾನೆ. ಈ ಬಗ್ಗೆ ಕೇಳಿದವರಿಗೆ ಪತ್ನಿ ಪ್ರವಾಸಕ್ಕೆ ಹೋಗಿದ್ದಾಳೆ ಎಂದು ಕಥೆ ಹೇಳಿದ್ದಾನೆ.

ನಂತರ ಮದ್ಯದ ಪಾರ್ಟಿ ಮಾಡುವ ನೆಪದಲ್ಲಿ ಭಾಮೈದರಾದ ಶಿವಕುಮಾರ್ ಹಾಗೂ ಶಂಕರ್ ಅವರನ್ನು ಕರೆಸಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ಅವರ ಪತ್ನಿಯರಾದ ನಳಿನ ಹಾಗೂ ದಿವ್ಯಾಳನ್ನು ಕೊಲೆ ಮಾಡಿದ್ದಾನೆ. ನಂತರ ಅತ್ತೆ ರೂಪವತಿ ಹಾಗೂ ಶಂಕರ್ ನ ಏಳು ವರ್ಷದ ಪುತ್ರ ಪುನೀತ್ ನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ರೂಪವತಿಯ ಸೊಸೆ ನಳಿನಾ ನಿಗೂಢವಾಗಿ ನಾಪತ್ತೆಯಾದ ಬಗ್ಗೆ ಆಕೆಯ ತವರು ಮನೆಯವರು ಶ್ರೀರಾಮಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ವೇಳೆ ಇಂದು ಶೇಖರ್ ನ ವಿಚಾರಣೆ ನಡೆಸಿದ ಪೊಲೀಸರಿಗೆ ಆತನ ಗೊಂದಲದ ಹೇಳಿಕೆಗಳು ಅನುಮಾನ ಹುಟ್ಟಿಸಿವೆ. ಈ ಹಿನ್ನೆಲೆಯಲ್ಲಿ ಮನೆಗೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

ಏಳು ಜನರ ಕೊಲೆಗೆ ಬಳಸಿರುವ ರುಬ್ಬುಗುಂಡನ್ನು ಆರೋಪಿ ತೊಳೆದು ಮನೆಯಲ್ಲೇ ಇಟ್ಟಿರುವುದು ಪತ್ತೆಯಾಗಿದೆ. ಸದ್ಯ ಬಾಲಕ ಪುನೀತ್ ನ ಮೃತದೇಹ ಪತ್ತೆಯಾಗಿದ್ದು, ಉಳಿದವರ ಮೃತದೇಹಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor