Belagavi | ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು
ಬೆಳಗಾವಿ : ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ ವರದಿಯಾಗಿದೆ.
ಗಣೇಶ ಮೂರ್ತಿ ವಿಸರ್ಜನೆಗಾಗಿ ಕೆರೆಗೆ ಇಳಿದಿದ್ದ ಯುವಕ ನೀರಿನಲ್ಲಿ ಮುಳುಗಿರುವ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿ ಯುವಕನ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ.
ತುರ್ತು ಕರೆ ಬಂದ ತಕ್ಷಣ ಸೋಶಿಯಲ್ ವರ್ಕರ್ ರಕ್ಷಣಾ ತಂಡ ಬೆಳಗಾವಿ ಸ್ಥಳಕ್ಕೆ ಧಾವಿಸಿತು. ಸುಮಾರು 15 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದ ಅವಧೂತ್ ತುಡವೇಕರ್, ಪದ್ಮಪ್ರಸಾದ್ ಹೊಳಿ, ಶುಭಂ ಹೊಳಿ, ಮೈಕೆಲ್ ಪಿಂಟೋ, ಜಗದೀಶ್ ಗಸ್ತಿ ಹಾಗೂ ರಾಜು ಟಕ್ಕೇಕರ್ ಅವರು ತಕ್ಷಣ ಶೋಧ ಕಾರ್ಯಾಚರಣೆ ಆರಂಭಿಸಿದರು. ಸುಮಾರು 30 ನಿಮಿಷಗಳ ಕಾರ್ಯಾಚರಣೆಯ ಬಳಿಕ ಯುವಕನ ಮೃತದೇಹವನ್ನು ಕೆರೆಯಿಂದ ಹೊರತೆಗೆದು, ಮುಂದಿನ ಕಾನೂನು ಪ್ರಕ್ರಿಯೆಗಾಗಿ ಪೊಲೀಸರಿಗೆ ಹಸ್ತಾಂತರಿಸಲಾಯಿತು.
ರಕ್ಷಣಾ ಕಾರ್ಯಾಚರಣೆಯಲ್ಲಿ ಎಸ್‌ಡಿಆರ್‌ಎಫ್, ಬೆಳಗಾವಿ ಗ್ರಾಮೀಣ ಪೊಲೀಸರು ಹಾಗೂ ಬೆಳಗಾವಿ ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರ ನೀಡಿದರು.