ಬೆಳಗಾವಿ ಕಾಂಗ್ರೆಸ್ ಗೆ ಹೊಸ ಸಾರಥ್ಯ: ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ಬಸವರಾಜ ಶೇಗಾವಿ, ನಗರ ಅಧ್ಯಕ್ಷರಾಗಿ ರಾಜಾ ಸಲೀಂ ನೇಮಕ
ಬೆಳಗಾವಿ: ಸುದೀರ್ಘ 10 ವರ್ಷಗಳ ಕಾಲ ಬೆಳಗಾವಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ವಿನಯ ನಾವಲಗಟ್ಟಿಯವರನ್ನು ಬದಲಾಯಿಸಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ), ಬೆಳಗಾವಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಬಸವರಾಜ ಶೇಗಾವಿ ಅವರನ್ನು ನೇಮಿಸಿದೆ. ಇದೇ ವೇಳೆ ಬೆಳಗಾವಿ ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಸಲೀಂ ಬಿ. ಖತೀಬ್ (ರಾಜಾ ಸಲೀಂ ಕಾಶೀಮನವರ) ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.
ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದ ಹಿನ್ನೆಲೆಯಲ್ಲಿ ಪಕ್ಷದ ನಿಷ್ಠಾವಂತ ಹಿರಿಯ ಕಾರ್ಯಕರ್ತ ಬಸವರಾಜ ಶೇಗಾವಿ ಅವರಿಗೆ ಜವಾಬ್ದಾರಿ ನೀಡಲಾಗಿದೆ. ನಗರ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ರಾಜಾಸಲೀಂ ಕಾಶೀಮನವರ ಅವರಿಗೆ ವಹಿಸುವ ಮೂಲಕ ಬೆಳಗಾವಿ ನಗರದಲ್ಲಿ ಪಕ್ಷ ಸಂಘಟನೆಗೆ ಹೊಸ ಚುರುಕು ನೀಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿದೆ.
ಮೂಲತಃ ಸವದತ್ತಿ ತಾಲೂಕಿನ ಏಣಗಿ ಸುತಗಟ್ಟಿ ಗ್ರಾಮದವರಾದ ಬಸವರಾಜ ಶೇಗಾವಿ ಕೃಷಿಕ ಕುಟುಂಬದ ಹಿನ್ನೆಲೆಯವರು. ಶಿಕ್ಷಕ ಕುಟುಂಬದಲ್ಲಿ ಬೆಳೆದಿರುವ ಅವರು ಬೆಳಗಾವಿ ನಗರದಲ್ಲಿ ನೆಲೆಸಿದ್ದು, ಕಳೆದ 32 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
1994ರಲ್ಲಿ ಯುವ ಕಾಂಗ್ರೆಸ್ ಬೂತ್ ಅಧ್ಯಕ್ಷರಾಗಿ ರಾಜಕೀಯ ಸಂಘಟನೆಯಲ್ಲಿ ತಮ್ಮ ಪಯಣ ಆರಂಭಿಸಿದ ಬಸವರಾಜ ಶೇಗಾವಿ, ಬಳಿಕ ವಾರ್ಡ್ ಅಧ್ಯಕ್ಷ, ಯುವ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸಂಯೋಜಕರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. 2011-12ರಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಉಸ್ತುವಾರಿ ಹಾಗೂ ತೇರದಾಳ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಇನ್ನು ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ರಾಜಾ ಸಲೀಂ ಕಾಶೀಮನವರ ಮೂಲತಃ ಕಿತ್ತೂರು ವಿಧಾನಸಭಾ ಕ್ಷೇತ್ರದ ದಾಸಿಕೊಪ್ಪ ಗ್ರಾಮದವರು. ಯುವ ಕಾಂಗ್ರೆಸ್ನಿಂದಲೇ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿರುವ ಅವರು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ, ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ, ಜಿಲ್ಲಾ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮುಖ್ಯಸ್ಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಕಳೆದ 20ರಿಂದ 25 ವರ್ಷಗಳಿಂದ ಬೆಳಗಾವಿಯಲ್ಲಿ ನೆಲೆಸಿರುವ ರಾಜಾಸಲೀಂ ಕಾಶೀಮನವರ ಅವರು ಕಾಂಗ್ರೆಸ್ ಪಕ್ಷದ ಸಂಘಟನೆ, ಪ್ರತಿಭಟನೆ, ಚುನಾವಣಾ ಪ್ರಚಾರ ಹಾಗೂ ಕಾರ್ಯಕರ್ತರ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಿತ್ತೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದೇ ವೇಳೆ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಲಕ್ಷ್ಮಣರಾವ ಚಿಂಗಳೆ ಅವರನ್ನು ಮುಂದುವರಿಸಲಾಗಿದೆ.
2016ರವರೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ವಿನಯ ನಾವಲಗಟ್ಟಿ ಅವರಿಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಲಾಗಿತ್ತು. ಸತತ 10 ವರ್ಷಗಳ ಕಾಲ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನಾವಲಗಟ್ಟಿಯವರನ್ನು ಇದೀಗ ಬದಲಾಯಿಸಲಾಗಿದ್ದು, ಬಸವರಾಜ ಶೇಗಾವಿ ಅವರಿಗೆ ಹೊಸ ಜವಾಬ್ದಾರಿ ವಹಿಸಲಾಗಿದೆ.