Belagavi | ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯ ಕೊಲೆ: ಆರೋಪಿ ಮೊಮ್ಮಗನ ಬಂಧನ
ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ಪಾಲು ನೀಡಲು ನಿರಾಕರಿಸಿದ ಕಾರಣಕ್ಕೆ ಸ್ವಂತ ಅಜ್ಜಿಯನ್ನು ಮೊಮ್ಮಗನೇ ಕತ್ತು ಹಿಸುಕಿ ಕೊಲೆಗೈದು ಮೃತದೇಹವನ್ನು ಗೋಣಿಚೀಲಗಳಲ್ಲಿ ತುಂಬಿಸಿ ಡ್ಯಾಂ ಹಿನ್ನೀರಿಗೆ ಎಸೆದ ಘಟನೆ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದ ಹಮ್ಮವ್ವ ಬಾಲಪ್ಪ ಸನದಿ (78) ಕೊಲೆಯಾದವರು. ಅವರ ಮೊಮ್ಮಗ ಭೀಮಪ್ಪ ರಾಮಪ್ಪ ಸನದಿ (20) ಕೊಲೆ ಆರೋಪಿಯಾಗಿದ್ದು, ಆತನನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಹಮ್ಮವ್ವಗೆ ಬರುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ತನಗೂ ಪಾಲು ನೀಡುವಂತೆ ಮೊಮ್ಮಗ ಭೀಮಪ್ಪ ಪದೇ ಪದೇ ತಕರಾರು ತೆಗೆಯುತ್ತಿದ್ದ ಎನ್ನಲಾಗಿದೆ. ನವೆಂಬರ್ 10ರಂದು ಪಾಶ್ಚಾಪುರ ಸಂತೆಗೆ ಹೋಗಿ ಬರುವುದಾಗಿ ಹೇಳಿ ಹಮ್ಮವ್ವ ಮನೆಯಿಂದ ತೆರಳಿದ್ದರು. ಇದೇ ವೇಳೆ ಅಜ್ಜಿಯನ್ನು ಬೈಕಿನಲ್ಲಿ ಗವಿಸಿದ್ದೇಶ್ವರ ಗುಡ್ಡಕ್ಕೆ ಕರೆದೊಯ್ದ ಆರೋಪಿ, ಮತ್ತೆ ಹಣಕ್ಕಾಗಿ ಪೀಡಿಸಿದ್ದಾನೆ. ಅಜ್ಜಿ ಹಣ ನೀಡಲು ನಿರಾಕರಿಸಿದಾಗ ಕುತ್ತಿಗೆ ಹಿಸುಕಿ ಹಾಗೂ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಕೊಲೆಯ ಬಳಿಕ ಮೃತದೇಹವನ್ನು ಗುಡ್ಡದಲ್ಲೇ ಬಿಟ್ಟು ಪಾಶ್ಚಾಪುರಕ್ಕೆ ತೆರಳಿ ಎರಡು ಗೋಣಿಚೀಲಗಳನ್ನು ಖರೀದಿಸಿ ತಂದಿದ್ದಾನೆ. ಮೃತ ಅಜ್ಜಿಯ ಬಳಿಯಿದ್ದ 2,300 ರೂ. ನಗದು ಹಾಗೂ ಕೊರಳಲ್ಲಿದ್ದ ಎರಡು ಚಿನ್ನದ ಸರಗಳನ್ನು ಕಿತ್ತುಕೊಂಡು, ಮೃತದೇಹವನ್ನು ಗೋಣಿಚೀಲಗಳಲ್ಲಿ ತುಂಬಿಸಿಟ್ಟಿದ್ದಾನೆ. ಬಳಿಕ ರಾತ್ರಿ ಬೈಕಿನಲ್ಲಿ ಮೃತದೇಹವನ್ನು ಕೊಂಡೊಯ್ದು ಗೋಣಿಚೀಲಗಳಿಗೆ ಎರಡು ದೊಡ್ಡ ಕಲ್ಲುಗಳನ್ನು ಕಟ್ಟಿ ಜಿನರಾಳ ಗ್ರಾಮದ ಹದ್ದಿಯ ಘಟಪ್ರಭಾ ನದಿ ಡ್ಯಾಂನ ಹಿನ್ನೀರಿಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಮ್ಮವ್ವಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಈ ನಡುವೆ ನವೆಂಬರ್ 15ರಂದು ಸಂಜೆ ಡ್ಯಾಂ ಹಿನ್ನೀರಿನಲ್ಲಿ ಹಮ್ಮವ್ವರ ಮೃತದೇಹ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮೃತಳ ಮಗಳು ಭೀಮವ್ವ ಪರಸಪ್ಪ ಈರನಟ್ಟಿ ನೀಡಿದ ದೂರಿನಂತೆ ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆಗೆ ಕೈಗೆತ್ತಿಕೊಂಡ ಪೊಲೀಸರು ಮೃತದೇಹ ವಿಲೇವಾರಿಗೆ ಬಳಸಿದ ಗೋಣಿಚೀಲದ ಮೂಲದ ಬೆನ್ನು ಹಿಡಿದರು. ಚೀಲ ಮಾರಾಟದ ಅಂಗಡಿಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಭೀಮಪ್ಪ ಚೀಲ ಖರೀದಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಭೀಮಪ್ಪ ರಾಮಪ್ಪ ಸನದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.