ಬೆಳಗಾವಿ ಜಿಲ್ಲಾ ವಿಭಜನೆ ಕೂಗಿಗೆ ಮತ್ತೆ ಜೀವ: ಅಧಿವೇಶನದ ಬಳಿಕ ಪ್ರತ್ಯೇಕ ಅಥಣಿ ಜಿಲ್ಲೆ ರಚನೆಗೆ ಪ್ರಯತ್ನ ಎಂದ ಸಚಿವ ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ
ಬೆಳಗಾವಿ : ಬೆಳಗಾವಿ ಜಿಲ್ಲೆ ವಿಭಜನೆ ಹಾಗೂ ನೂತನ ಅಥಣಿ ಜಿಲ್ಲೆ ರಚನೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. "ಬೆಳಗಾವಿ ಅಧಿವೇಶನ ಮುಗಿದ ಬಳಿಕ ಅಥಣಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸೋಣ" ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಅಥಣಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈಗಾಗಲೇ ಅಥಣಿ, ಕಾಗವಾಡ ಹಾಗೂ ಕುಡಚಿ ವಿಧಾನಸಭಾ ಕ್ಷೇತ್ರಗಳ ಜನರು ಒಗ್ಗಟ್ಟಾಗಿದ್ದೇವೆ. ಇನ್ನೆರಡು ಕ್ಷೇತ್ರಗಳನ್ನು ಸೇರ್ಪಡೆ ಮಾಡಿಕೊಂಡು ನೂತನ ಅಥಣಿ ಜಿಲ್ಲೆ ರಚನೆ ಮಾಡೋಣ ಎಂದು ಪ್ರಸ್ತಾಪಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಚಿಕ್ಕೋಡಿ, ಗೋಕಾಕ ಹಾಗೂ ಬೈಲಹೊಂಗಲ ಭಾಗದ ಜನರು ಕೂಡ ಪ್ರತ್ಯೇಕ ಜಿಲ್ಲೆಗಾಗಿ ನಿರಂತರ ಬೇಡಿಕೆ ಸಲ್ಲಿಸುತ್ತಿದ್ದಾರೆ. ಈ ನಡುವೆ ಮಾತನಾಡಿರುವ ಸವದಿ, "ಅಥಣಿಯನ್ನು ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಅಧಿವೇಶನದ ಬಳಿಕ ಮುಂದಿನ ಹೆಜ್ಜೆ ಇಡೋಣ. ಈಗಾಗಲೇ ಅಥಣಿಗೆ ಹಲವು ಸರ್ಕಾರಿ ಕಚೇರಿಗಳನ್ನು ತರಲಾಗಿದೆ. ಉಳಿದ ಕಚೇರಿಗಳನ್ನು ಕೂಡ ಹಂತ ಹಂತವಾಗಿ ತರಲಾಗುವುದು" ಎಂದು ಭರವಸೆ ನೀಡಿದ್ದಾರೆ.
ಬೆಳಗಾವಿ ರಾಜ್ಯದ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದ್ದು, ಸುಮಾರು 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಜಿಲ್ಲೆಯ ಭೌಗೋಳಿಕ ವ್ಯಾಪ್ತಿ ಅತ್ಯಂತ ವಿಶಾಲವಾಗಿರುವುದರಿಂದ ದೂರದ ತಾಲೂಕುಗಳ ಜನರು ಸರ್ಕಾರಿ ಕೆಲಸಗಳಿಗಾಗಿ ಜಿಲ್ಲಾ ಕೇಂದ್ರಕ್ಕೆ ಬರಲು 80ರಿಂದ 120 ಕಿ.ಮೀ.ವರೆಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಆಡಳಿತಾತ್ಮಕ ಅನುಕೂಲಕ್ಕಾಗಿ ಜಿಲ್ಲೆ ವಿಭಜಿಸಬೇಕೆಂಬ ಬೇಡಿಕೆ ದಶಕಗಳಿಂದ ಕೇಳಿಬರುತ್ತಿದೆ. ನೂತನ ಜಿಲ್ಲೆ ರಚನೆಯಾದರೆ ಸರ್ಕಾರಿ ಕಚೇರಿಗಳು ಜನರಿಗೆ ಹತ್ತಿರವಾಗಲಿದ್ದು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಲಿದೆ. ಕೃಷಿ, ಸಕ್ಕರೆ ಉದ್ಯಮ ಹಾಗೂ ಸ್ಥಳೀಯ ಕೈಗಾರಿಕೆಗಳ ಅಭಿವೃದ್ಧಿಗೂ ಹೆಚ್ಚಿನ ಉತ್ತೇಜನ ಸಿಗಲಿದ್ದು, ರಸ್ತೆ, ಮಾರುಕಟ್ಟೆ ಸೇರಿದಂತೆ ಮೂಲಸೌಕರ್ಯಗಳ ವಿಸ್ತರಣೆ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಎಂಬ ನಿರೀಕ್ಷೆ ಜನರಲ್ಲಿದೆ.
ಆಡಳಿತಾತ್ಮಕವಾಗಿ ಬೆಳಗಾವಿ ಅತ್ಯಂತ ದೊಡ್ಡ ವ್ಯಾಪ್ತಿಯನ್ನು ಹೊಂದಿದ್ದು, ಒಟ್ಟು 18 ವಿಧಾನಸಭಾ ಕ್ಷೇತ್ರಗಳು ಹಾಗೂ 3 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಇದರೊಂದಿಗೆ 15 ತಾಲೂಕುಗಳು, 6 ಆರ್ಟಿಒ ಕಚೇರಿಗಳು ಹಾಗೂ 506 ಗ್ರಾಮ ಪಂಚಾಯಿತಿಗಳು ಈ ಜಿಲ್ಲೆಯ ವ್ಯಾಪ್ತಿಯಲ್ಲಿವೆ. ಇಷ್ಟೊಂದು ಬೃಹತ್ ಆಡಳಿತಾತ್ಮಕ ವ್ಯಾಪ್ತಿಯನ್ನು ಹೊಂದಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆಗಳನ್ನು ರಚಿಸಬೇಕೆಂಬ ಕೂಗು ಆಗಾಗ್ಗೆ ಕೇಳಿಬರುತ್ತಿದೆ.
ಒಟ್ಟಿನಲ್ಲಿ ಬೆಳಗಾವಿ ಅಧಿವೇಶನದ ಹೊತ್ತಲ್ಲೇ ಅಥಣಿ ಜಿಲ್ಲೆ ರಚನೆ ಕುರಿತು ಲಕ್ಷ್ಮಣ ಸವದಿ ನೀಡಿರುವ ಹೇಳಿಕೆ ಜಿಲ್ಲಾ ವಿಭಜನೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ ಅಂತಿಮವಾಗಿ ಯಾವ ಯಾವ ತಾಲೂಕುಗಳನ್ನು ಒಗ್ಗೂಡಿಸಿ ಹೊಸ ಜಿಲ್ಲೆ ರಚಿಸಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.