Belagavi | ಇನ್‌ಸ್ಟಾಗ್ರಾಂ ಮೂಲಕ ʼಹನಿಟ್ರ್ಯಾಪ್ʼ: ಯುವಕನ ಕೊಲೆ ಪ್ರಕರಣ ಭೇದಿಸಿದ ಪೊಲೀಸರು
ಸಾಂದರ್ಭಿಕ ಚಿತ್ರ (AI)
ಬೆಳಗಾವಿ: ಕಾಣೆಯಾಗಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದ್ದು, ಇನ್‌ಸ್ಟಾಗ್ರಾಂ ಮೂಲಕ ʼಹನಿಟ್ರ್ಯಾಪ್ʼ ಮಾಡಿ ಯುವಕನನ್ನು ಬಲೆಗೆ ಬೀಳಿಸಿ ಕೊಲೆ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ.
ಮೃತ ಯುವಕನನ್ನು ಗಾಂಧಿನಗರದ ಸರ್ವೇಶ ಕಂಗ್ರಾಳಕರ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿ ಜಾಲಗಾರ, ರಾಹುಲ್ ಜಾಲಗಾರ, ದಶರತ ರಜಪೂತ ಹಾಗೂ ಅರುಣ ಹುಲ್ಲೋಳಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ಅವರ ಮಾರ್ಗದರ್ಶನದಲ್ಲಿ, ಮಾಳಮಾರುತಿ ಠಾಣೆ ಸಿಪಿಐ ಬಿ.ಆರ್. ಗಡೇಕರ್ ನೇತೃತ್ವದ ತಂಡ ತನಿಖೆ ನಡೆಸಿ ಪ್ರಕರಣವನ್ನು ಭೇದಿಸಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, 2025ರಲ್ಲಿ ನಡೆದ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಜಗಳವೇ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಈ ವೇಳೆ ಸರ್ವೇಶ ಹಾಗೂ ಶಶಿ ಜಾಲಗಾರ ನಡುವೆ ಗಲಾಟೆ ನಡೆದಿದ್ದು, ಸರ್ವೇಶನಿಂದ ಶಶಿ ಮೇಲೆ ಹಲ್ಲೆ ನಡೆದಿತ್ತು ಎನ್ನಲಾಗಿದೆ. ಇದರಿಂದ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಳೆಯ ದ್ವೇಷವನ್ನೇ ಮುಂದಿಟ್ಟುಕೊಂಡು ಶಶಿ ಜಾಲಗಾರ ತನ್ನ ಸಹಚರರೊಂದಿಗೆ ಸೇರಿ ಸರ್ವೇಶನ ಕೊಲೆಗೆ ಸಂಚು ರೂಪಿಸಿದ್ದಾನೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕೊಲೆಗೆ ಆರೋಪಿಗಳು ಇನ್‌ಸ್ಟಾಗ್ರಾಂ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಯುವತಿಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ, ಅದರ ಮೂಲಕ ಸರ್ವೇಶನಿಗೆ ಸಂದೇಶ ಕಳುಹಿಸಿ ಆತನೊಂದಿಗೆ ಆತ್ಮೀಯತೆ ಬೆಳೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಇದೇ ಪರಿಚಯವನ್ನು ಬಳಸಿಕೊಂಡು ಸರ್ವೇಶನನ್ನು ನಿರ್ದಿಷ್ಟ ಸ್ಥಳಕ್ಕೆ ಕರೆಸಿಕೊಂಡು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಕೊಲೆಯ ಹಿಂದಿನ ಸಂಪೂರ್ಣ ಸಂಚು ಹಾಗೂ ಆರೋಪಿಗಳ ಪಾತ್ರದ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.