ಶಿವಾನಂದ ಎಚ್.ಕೌಜಲಗಿ

ಬೆಳಗಾವಿ: ಹಿರಿಯ ಮುತ್ಸದ್ದಿ ರಾಜಕಾರಣಿ, ಲೋಕೋಪಯೋಗಿ ಇಲಾಖೆಯ ಮಾಜಿ ಸಚಿವ ಹಾಗೂ ಕೆಎಲ್‌ಇ ಸಂಸ್ಥೆಯ ಮಾಜಿ ಅಧ್ಯಕ್ಷ ಶಿವಾನಂದ ಎಚ್.ಕೌಜಲಗಿ (87) ಅವರು ಶುಕ್ರವಾರ ಬೆಳಿಗ್ಗೆ ನಿಧನರಾದರು.

ಶಾಸಕ ಮಹಾಂತೇಶ ಕೌಜಲಗಿ ಅವರ ತಂದೆಯಾಗಿರುವ ಶಿವಾನಂದ ಕೌಜಲಗಿ ಅವರು ಕಳೆದ ಮೂರು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ ಅವರು, ಕಳೆದೊಂದು ದಶಕದಿಂದ ರಾಜಕೀಯ ಚಟುವಟಿಕೆಗಳಿಂದಲೂ ದೂರವಿದ್ದರು.

ಗುರುವಾರ ರಾತ್ರಿ ಮಲಗಿದ್ದ ಅವರು ಶುಕ್ರವಾರ ಬೆಳಿಗ್ಗೆ ಎಚ್ಚರಗೊಳ್ಳದ ಹಿನ್ನೆಲೆಯಲ್ಲಿ ಕುಟುಂಬದವರು ಪರಿಶೀಲಿಸಿದಾಗ ಮೃತಪಟ್ಟಿರುವುದು ತಿಳಿದುಬಂದಿದೆ.

ಅಭಿವೃದ್ಧಿ ಕಾರ್ಯಗಳ ಮೂಲಕ ಜನಮಾನಸದಲ್ಲಿ ನೆಲೆಸಿದ್ದ ನಾಯಕ :

ಕಿತ್ತೂರು ಕರ್ನಾಟಕ ಭಾಗದ ಹಿರಿಯ, ಸಜ್ಜನ ಹಾಗೂ ಸೌಮ್ಯ ಸ್ವಭಾವದ ರಾಜಕಾರಣಿಯಾಗಿ ಶಿವಾನಂದ ಕೌಜಲಗಿ ಅವರು ಗುರುತಿಸಿಕೊಂಡಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಕಾರ್ಯಗಳು ಇಂದಿಗೂ ಜನರಿಗೆ ಉಪಯುಕ್ತವಾಗಿವೆ. ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದರೂ, ಜನಪರ ಕಾರ್ಯಗಳ ಮೂಲಕ ಈ ಭಾಗದ ಜನರ ಗೌರವಕ್ಕೆ ಪಾತ್ರರಾಗಿದ್ದರು. ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳು ಲಭಿಸಿದ್ದವು.

ಮೃತರು ಪತ್ನಿ, ಪುತ್ರರಾದ ಶಾಸಕ ಮಹಾಂತೇಶ ಕೌಜಲಗಿ, ಕಾಂಗ್ರೆಸ್ ಮುಖಂಡ ಬಸವರಾಜ ಕೌಜಲಗಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಶನಿವಾರ ಅಂತ್ಯಕ್ರಿಯೆ :

ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಆಗಮಿಸಲು ಅನುಕೂಲವಾಗುವಂತೆ ಅಂತ್ಯಕ್ರಿಯೆಯನ್ನು ಶನಿವಾರ (ಅ.31) ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ಆನಿಗೋಳ ರಸ್ತೆಯ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡುವುದಿಲ್ಲ. ಮನೆಯಲ್ಲಿಯೇ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶಿವಾನಂದ ಕೌಜಲಗಿ ಅವರ ನೇತ್ರದಾನಕ್ಕೂ ವ್ಯವಸ್ಥೆ ಮಾಡಲಾಗಿದೆ.

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಿವಾಸಕ್ಕೆ ಅಭಿಮಾನಿಗಳು, ಕಾರ್ಯಕರ್ತರು, ಬಂಧುಗಳು, ಮಿತ್ರರು ಹಾಗೂ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂತಾಪ ಸೂಚಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor