ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಕಿತ್ತೂರು ರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ : ಸಿಎಂ ಡಿ.ಕೆ.ಶಿವಕುಮಾರ್
► "ಕಿತ್ತೂರಿನ ಅಭಿವೃದ್ಧಿಗೆ ಸುಮಾರು 1 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳು" ► ʼಕಿತ್ತೂರು ಉತ್ಸವʼ ಕಾರ್ಯಕ್ರಮ
ಕಿತ್ತೂರು : ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಕಿತ್ತೂರು ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡಲಾಗುವುದು. ಚನ್ನಮ್ಮ ಫ್ರೀಡಂ ಪಾರ್ಕ್ ನಿರ್ಮಾಣಕ್ಕೆ ತಕ್ಷಣವೇ ಆದೇಶ ನೀಡಲಾಗುವುದು. ಶಾಸಕರ ಬೇಡಿಕೆ ಮೇರೆಗೆ ಮುಂದಿನ ಬಜೆಟ್ ನಲ್ಲಿ 40 ಕೋಟಿ ರೂ. ಅನುದಾನ ನೀಡಲಾಗುವುದು" ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದರು.
ರವಿವಾರ ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ಕಿತ್ತೂರು ಉತ್ಸವದಲ್ಲಿ ಮಾತನಾಡಿದ ಅವರು, ಶಾಸಕ ಬಾಬಾಸಾಹೇಬ್ ಪಾಟೀಲ್ ಈ ಕೋಟೆಯಲ್ಲಿ ಇತಿಹಾಸದ ಪುಟ ಬರೆಯಬೇಕು, ಜನ ನನ್ನನ್ನು ಅಭಿಮಾನಪೂರ್ವಕವಾಗಿ ಆಯ್ಕೆ ಮಾಡಿದ್ದು ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಎಂದು ಬಯಸಿದ್ದಾರೆ. ಮುಂದಿನ ಪೀಳಿಗೆಗೆ ಈ ಕೋಟೆಯನ್ನು ಪ್ರವಾಸಿ ಕೇಂದ್ರ ಆಗಲು ಮನವಿ ಮಾಡಿದರು. ದೇವರು ವರ, ಶಾಪ ನೀಡಲ್ಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಸಂದರ್ಭದಲ್ಲಿ ಇಲ್ಲಿಗೆ ಬಂದಿರುವಾಗ ಏನಾದರೂ ಒಂದು ಕೊಡುಗೆ ನೀಡಬೇಕು. ಇತಿಹಾಸ ಉಳಿಸಲು, ನಮ್ಮ ಸರ್ಕಾರ ಇಂತಹ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ತಿಳಿಸಿದರು.
"ಈ ಕ್ಷೇತ್ರದಲ್ಲಿ 100 ಹಾಸಿಗೆಗಳ ಆಸ್ಪತ್ರೆ, 300 ಕೋಟಿ ರೂ. ಮೊತ್ತದ ಲೋಕೋಪಯೋಗಿ ಇಲಾಖೆ ಕಾಮಗಾರಿ ಸೇರಿದಂತೆ ಸುಮಾರು 1 ಸಾವಿರ ಕೋಟಿ ವೆಚ್ಚದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ" ಎಂದು ಅವರು ವಿವರಿಸಿದರು.
ವೀರ ರಾಣಿ ಚನ್ನಮ್ಮ ಸಾಹಸ ನಮ್ಮೆಲ್ಲರ ಸ್ಫೂರ್ತಿ
"ಕಿತ್ತೂರಿಗೆ ತನ್ನದೇ ಆದ ಇತಿಹಾಸವಿದೆ. ಚನ್ನಮ್ಮ ಕನ್ನಡದ ಮಣ್ಣಿಗಾಗಿ ಮಡಿದ ದಿಟ್ಟ ಹೋರಾಟಗಾರ್ತಿ. ಕಿತ್ತೂರಿನ ಕಥೆ ಚನ್ನಮ್ಮ ಅವರ ಇತಿಹಾಸ ಸಾರುತ್ತದೆ, ಸ್ವಾಭಿಮಾನದ ಮಹಿಮೆ. ರಾಣಿ ಚನ್ನಮ್ಮನ ಧೈರ್ಯ ಪ್ರತಿ ಪೀಳಿಗೆಗೆ ಸ್ವಾಭಿಮಾನದ ಪಾಠ. ಕಿತ್ತೂರು ಎಂದರೆ ವೀರರ ಸಂಕೇತ. ಕಿತ್ತೂರು ಉತ್ಸವ ನಾಡಿನ ಹೆಮ್ಮೆಯ ಸಂಕೇತ. ವೀರ ರಾಣಿ ಚನ್ನಮ್ಮ ಸಾಹಸ ನಮ್ಮೆಲ್ಲರ ಸ್ಫೂರ್ತಿ. ಚನ್ನಮ್ಮ ಅವರ ತ್ಯಾಗದ ನೆನಪು ಅಜರಾಮರ. ನಾಡಿನ ಸಂಸ್ಕೃತಿ. ಚನ್ನಮ್ಮ ಎಂಬುದು ಕೇವಲ ಹೆಸರಲ್ಲ ಸ್ವಾಭಿಮಾನ, ಶೌರ್ಯ, ಸ್ವಾತಂತ್ರ್ಯದ ಸಂಕೇತ" ಎಂದು ಅವರು ಬಣ್ಣಿಸಿದರು.
"ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆ ಮೂಲಕ ಬಡ ಕುಟುಂಬದ ಯಜಮಾನಿಯರಿಗೆ ಮಾಸಿಕ 2 ಸಾವಿರ ರೂ. ನೀಡಲಾಗುತ್ತಿದೆ. (ಗೃಹಲಕ್ಷ್ಮಿ ಯೋಜನೆ ಮೂಲಕ 76,950 ಕೋಟಿ ರೂ. ಹಣ ನೀಡಲಾಗಿದೆ). ಅನ್ನಭಾಗ್ಯ, ಯುವನಿಧಿ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. ನಿಮ್ಮ ಮನೆಬಾಗಿಲಿಗೆ ಬಂದು ನಿಮ್ಮ ಕಷ್ಟ ಕೇಳಲು ಪ್ರಜಾಸೇವೆ ಇಲಾಖೆ ಆರಂಭಿಸಿದ್ದೇವೆ. ಸುವರ್ಣ ಸೌಧದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ ಮಾಡಿದೆವು. ಸಮಾನತೆಯಿಂದ ಬೆಳೆಯಲು, ಪ್ರಜಾಪ್ರಭುತ್ವ ಮೌಲ್ಯ ಎತ್ತಿ ಹಿಡಿಯಲು ಕಾರ್ಯಕ್ರಮ ರೂಪಿಸಿದ್ದೇವೆ" ಎಂದು ವಿವರಿಸಿದರು.