×
Ad

ಲೋಕೋಪಯೋಗಿ ಖಾತೆಯನ್ನೇ ಮುಂದುವರಿಸಿದ್ದಕ್ಕೆ ಸಂತೋಷ: ಸಚಿವ ಸತೀಶ್ ಜಾರಕಿಹೊಳಿ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿರುವ ಕುರಿತು ಸಚಿವರ ಪ್ರತಿಕ್ರಿಯೆ ಏನು?

Update: 2026-06-07 20:03 IST

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: ತಾನು ಯಾವುದೇ ನಿರ್ದಿಷ್ಟ ಖಾತೆಗಾಗಿ ಪಕ್ಷದ ಹೈಕಮಾಂಡ್ ಅಥವಾ ಮುಖ್ಯಮಂತ್ರಿಗಳ ಬಳಿ ಬೇಡಿಕೆ ಇಟ್ಟಿರಲಿಲ್ಲ. ಈ ಹಿಂದೆ ತನ್ನ ಬಳಿ ಇದ್ದ ಲೋಕೋಪಯೋಗಿ ಇಲಾಖೆಯನ್ನೇ ಮತ್ತೆ ವಹಿಸಿರುವುದು ಸಂತೋಷ ತಂದಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಗೋಕಾಕದಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ರವಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಪಕ್ಷದ ನಾಯಕತ್ವವೇ ಚರ್ಚಿಸಿ ಲೋಕೋಪಯೋಗಿ ಖಾತೆಯನ್ನು ಮುಂದುವರಿಸಲು ನಿರ್ಧರಿಸಿದೆ ಎಂದು ತಿಳಿಸಿದರು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಾದ್ಯಂತ ರಸ್ತೆ, ಸೇತುವೆ ಹಾಗೂ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ತೃಪ್ತಿ ಇದೆ. ಮತ್ತೆ ಅದೇ ಖಾತೆ ದೊರೆತಿರುವುದರಿಂದ ಈಗಾಗಲೇ ಆರಂಭಿಸಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಅನುಕೂಲವಾಗಲಿದೆ ಎಂದು ಹೇಳಿದರು. ಇಲಾಖೆಯಲ್ಲಿ ಇನ್ನೂ ಸಾಕಷ್ಟು ಕೆಲಸಗಳು ಬಾಕಿಯಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಬೆಳಗಾವಿ ಜಿಲ್ಲೆಗೆ ಯಾವುದೇ ಅನ್ಯಾಯವಾಗಿಲ್ಲ. ಸದ್ಯ ಬಿಡುಗಡೆಯಾಗಿರುವುದು ಮೊದಲ ಪಟ್ಟಿ ಮಾತ್ರವಾಗಿದ್ದು, ಮುಂದಿನ ಹಂತದಲ್ಲಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ದೊರೆಯುವ ವಿಶ್ವಾಸವಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಬೆಳಗಾವಿಯಂತಹ ದೊಡ್ಡ ಜಿಲ್ಲೆಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಸಚಿವ ಸಂಪುಟದ ಮುಂದಿನ ವಿಸ್ತರಣೆಯಲ್ಲಿ ಜಿಲ್ಲೆಗೆ ಸೂಕ್ತ ಪ್ರಾತಿನಿಧ್ಯ ದೊರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ʼಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲʼ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ಎಂಬ ನಿಯಮ ಜಾರಿಯಲ್ಲಿದೆ. ನಾನು ಈಗಾಗಲೇ ಸಚಿವನಾಗಿರುವ ಕಾರಣ ಆ ಹುದ್ದೆ ಸಿಗಲಿಲ್ಲ ಎಂದು ಹೇಳಿದರು.

ಪಕ್ಷದ ನಿಯಮಗಳಿಗೆ ಎಲ್ಲರೂ ಬದ್ಧರಾಗಿರಬೇಕು. ಹೈಕಮಾಂಡ್ ನಿರ್ಧಾರವನ್ನು ಗೌರವಿಸುವುದಾಗಿ ತಿಳಿಸಿದರು.

ʼಅಶೋಕ ಪಟ್ಟಣ ಹಾಗೂ ಸಿದ್ದರಾಮಯ್ಯ ಜತೆ ಭಿನ್ನಾಭಿಪ್ರಾಯ ಇಲ್ಲʼ

ನನ್ನ ಮತ್ತು ಶಾಸಕ ಅಶೋಕ ಪಟ್ಟಣ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವಿಬ್ಬರೂ ಮೊದಲಿನಿಂದಲೂ ಒಟ್ಟಿಗೇ ಇದ್ದೇವೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ನಮ್ಮ ನಾಯಕರು ಮತ್ತು ಮೊದಲಿನಿಂದಲೂ ಉತ್ತಮ ಬಾಂಧವ್ಯ ಇದೆ ಎಂದು ಹೇಳಿದರು.

ಮುಸ್ಲಿಂ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಬಗ್ಗೆ ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ನಿರ್ಣಯ ಅಂಗೀಕರಿಸುವಂತೆ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಹಣಕಾಸು ವಂಚನೆ ಪ್ರಕರಣಗಳಾದ ಆದಿತ್ಯರಾಜ್ ಕ್ಯಾಪಿಟಲ್ ಸೇರಿದಂತೆ ಇತರ ದೂರುಗಳ ಕುರಿತು ಮಾತನಾಡಿದ ಅವರು, ಕಾನೂನು ಪ್ರಕ್ರಿಯೆ ಹಾಗೂ ತನಿಖೆಯ ಆಧಾರದ ಮೇಲೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News