ಬೆಳಗಾವಿ : ಪ್ರಿಯಕರನೊಂದಿಗೆ ಸೇರಿ ಸ್ವಂತ ಮಗನನ್ನೇ ಕೊಲೆ ಮಾಡಿದ ಪ್ರಕರಣವನ್ನು ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಭೇದಿಸಿದ್ದು, ತಾಯಿ ಸೇರಿದಂತೆ 7 ಆರೋಪಿಗಳನ್ನು ಬಂಧಿಸಿದ್ದಾರೆ. ಅನೈತಿಕ ಸಂಬಂಧಕ್ಕೆ ಮಗ ಅಡ್ಡಿಯಾಗುತ್ತಿದ್ದ ಎಂಬ ಕಾರಣಕ್ಕೆ ವ್ಯವಸ್ಥಿತವಾಗಿ ಕೊಲೆ ಸಂಚು ರೂಪಿಸಿ, ಬೆಳಗಾವಿಗೆ ಕರೆತಂದು ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕ ನವೆಂಬರ್ 1ರಂದು ಯುವಕನ ಮೃತದೇಹ ಪತ್ತೆಯಾಗಿತ್ತು. ಯುವಕನ ಮೈಮೇಲಿನ ಗುರುತುಗಳು ಹಾಗೂ ಮೊಬೈಲ್ ದಾಖಲೆಗಳ ಜಾಡು ಹಿಡಿದು ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನ ವಿಜಯ ನಾರಾಯಣ್ ಕೊಲೆಯಾದ ಯುವಕ. ಆತನ ತಾಯಿ ಮೀನಾ ನಾರಾಯಣ್ ಹಾಗೂ ಈಕೆಯ ಪ್ರಿಯಕರ, ಕಾರು ಚಾಲಕನಾಗಿದ್ದ ಮಹಾರಾಷ್ಟ್ರದ ಇಚಲಕರಂಜಿ ಮೂಲದ ರಾಕೇಶ್ ಜಾಮೂನಿ ಪ್ರಮುಖ ಆರೋಪಿಗಳಾಗಿದ್ದಾರೆ. ಕೊಲೆಗೆ ಸಹಕರಿಸಿದ ಇತರ 5 ಆರೋಪಿಗಳನ್ನೂ ಬಂಧಿಸಲಾಗಿದೆ. ಬಂಧಿತರಲ್ಲಿ ಮೀನಾ ಮಾತ್ರ ಬೆಂಗಳೂರಿನವರಾಗಿದ್ದು, ಉಳಿದವರೆಲ್ಲ ಇಚಲಕರಂಜಿಯವರು ಎಂದು ಪೊಲೀಸ್ ಆಯುಕ್ತರು ವಿವರಿಸಿದರು.

ಬೆಂಗಳೂರಿನ ಬ್ಯೂಟಿ ಪಾರ್ಲರ್ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮೀನಾ ನಾರಾಯಣ್ ಹಾಗೂ ರಾಕೇಶ್ ಜಾಮೂನಿ ಪಾರ್ಲರ್ ಮೂಲಕವೇ ಪರಿಚಯವಾಗಿದ್ದರು. ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದಿದ್ದು, ರಾಕೇಶ್‌ನನ್ನು ಮೀನಾ ತಮ್ಮ ಕಾರು ಚಾಲಕನಾಗಿ ನೇಮಿಸಿಕೊಂಡಿದ್ದರು. ಮೀನಾ ಅವರ ಪತಿ ನಾರಾಯಣ್ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು, ಮಗ ವಿಜಯನೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು.

ರಾಕೇಶ್ ಜೊತೆಗಿನ ಮೀನಾ ಅವರ ಅನೈತಿಕ ಸಂಬಂಧಕ್ಕೆ ವಿಜಯ ವಿರೋಧ ವ್ಯಕ್ತಪಡಿಸುತ್ತಿದ್ದ. ಇದೇ ವಿಚಾರವಾಗಿ ತಾಯಿ ಮತ್ತು ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ತಮ್ಮ ಸಂಬಂಧಕ್ಕೆ ಮಗ ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿದ ಮೀನಾ, ಆತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಬೆಳಗಾವಿಗೆ ಕರೆತಂದು ಹತ್ಯೆ

ಊರಿಗೆ ಹೋಗೋಣ ಎಂದು ಮಗನನ್ನು ನಂಬಿಸಿ ಮೀನಾ ಬೆಳಗಾವಿಗೆ ಕರೆತಂದಿದ್ದರು. ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಕೊಲೆ ಮಾಡಲು ಯೋಜನೆ ರೂಪಿಸಲಾಗಿತ್ತು. ಅದರಂತೆ ವಿಜಯನಿಗೆ ತಂಪು ಪಾನೀಯದಲ್ಲಿ ನಿದ್ದೆ ಗುಳಿಗೆ ಬೆರೆಸಿ ಕುಡಿಸಲಾಗಿತ್ತು. ಗಾಢ ನಿದ್ದೆಗೆ ಜಾರಿದ ವಿಜಯನ ಕುತ್ತಿಗೆಗೆ ಶಾಲು ಬಿಗಿದು ರಾಕೇಶ್ ಕೊಲೆ ಮಾಡಿದ್ದಾನೆ. ಇದಕ್ಕೆ ಇತರ 5 ಸ್ನೇಹಿತರು ಸಹಕರಿಸಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಹೆದ್ದಾರಿ ಪಕ್ಕ ಮೃತದೇಹ ಎಸೆದು ಪರಾರಿ

ಕೊಲೆ ಮಾಡಿದ ಬಳಿಕ ಆರೋಪಿಗಳು ವಿಜಯನ ಮೃತದೇಹವನ್ನು ನಗರದ ಹೊರವಲಯದಲ್ಲಿರುವ ಆಸ್ಪತ್ರೆಯ ಆಚೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಸೆದು ಪರಾರಿಯಾಗಿದ್ದರು. ಅಪರಿಚಿತ ಶವವೆಂಬಂತೆ ಬಿಂಬಿಸಲು ಹಾಗೂ ಪೊಲೀಸರಿಗೆ ಸುಳಿವು ಸಿಗದಂತೆ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು ಎನ್ನಲಾಗಿದೆ.

ಯುವಕನ ಕುತ್ತಿಗೆಯ ಮೇಲೆ ಶಾಲಿನಿಂದ ಬಿಗಿದ ಗುರುತುಗಳನ್ನು ಗಮನಿಸಿದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮೊಬೈಲ್ ದಾಖಲೆಗಳು ಹಾಗೂ ಇತರ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಮಾಳಮಾರುತಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ 7 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor