ರಂಗಭೂಮಿಗೆ ವಿಶಿಷ್ಟ ಕೊಡುಗೆ; ಬೆಳಗಾವಿಯ ಡಾ.ಡಿ.ಎಸ್.ಚೌಗಲೆ ಅವರಿಗೆ ʼರಾಜ್ಯೋತ್ಸವ ಪ್ರಶಸ್ತಿʼ
ಬೆಳಗಾವಿ : ನಾಟಕಕಾರ, ಕತೆಗಾರ, ಕಾದಂಬರಿಕಾರ, ಅನುವಾದಕ ಹಾಗೂ ಚಿತ್ರಕಲಾವಿದರಾಗಿ ಕನ್ನಡ ಸಾಹಿತ್ಯ ಮತ್ತು ರಂಗಭೂಮಿಗೆ ಕೊಡುಗೆ ನೀಡಿರುವ ಬೆಳಗಾವಿಯ ಡಾ.ಡಿ.ಎಸ್.ಚೌಗಲೆ ಅವರು ಬಹುಮುಖ ಪ್ರತಿಭೆಯ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಅವರು ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
1961ರ ಜೂನ್ 10ರಂದು ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಜನಿಸಿದ ಅವರು, ಕನ್ನಡದಲ್ಲಿ ಎಂ.ಎ. ಮತ್ತು ಪಿಎಚ್.ಡಿ. ಪದವಿ ಪಡೆದಿದ್ದಾರೆ. ಭಾವುರಾವ ಕಾಕತಕರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
'ದಿಶಾಂತರ', 'ವಖಾರಿಧೂಸ', 'ಕಸ್ತೂರಬಾ', 'ಉದ್ವಸ್ಥ', 'ಸಾವಿತ್ರಿಬಾಯಿ ಫುಲೆ' ಹಾಗೂ 'ಜನಮಿತ್ರ ಅರಸು' ಸೇರಿದಂತೆ ಹಲವು ನಾಟಕಗಳನ್ನು ರಚಿಸಿದ್ದಾರೆ. ಮರಾಠಿ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ 'ದಿಶಾಂತರ' ನಾಟಕ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪದವಿ ಪಠ್ಯವಾಗಿತ್ತು. 'ಗಾಂಧಿ ವಿರುದ್ಧ ಗಾಂಧಿ' ನಾಟಕ ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ. ಪಠ್ಯದಲ್ಲಿ ಸ್ಥಾನ ಪಡೆದಿತ್ತು.
'ವಾರಸಾ', 'ಒಡಲ ಉರಿಯ ಹೊತ್ತು', 'ಚೌಗಲೆ ಕತೆಗಳು' ಸೇರಿದಂತೆ ಹಲವು ಕಥಾಸಂಕಲನ ಹಾಗೂ 'ಸದರಬಜಾರ್' ಕಾದಂಬರಿ ಪ್ರಕಟಿಸಿದ್ದಾರೆ. ಚಿತ್ರಕಲಾವಿದರಾಗಿಯೂ ಗುರುತಿಸಿಕೊಂಡಿರುವ ಅವರು, ಹಲವು ನಗರಗಳಲ್ಲಿ ಕಲಾಪ್ರದರ್ಶನಗಳನ್ನು ನಡೆಸಿದ್ದಾರೆ. 'ಮಾತಂಗಿ ದೀವಟಿಗೆ' ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದು, 'ಕ್ಯಾರಿ ಆನ್ ಮರಾಠಾ' ಚಿತ್ರಕ್ಕೆ ಕನ್ನಡ ಸಂಭಾಷಣೆ ಬರೆದಿದ್ದಾರೆ.
ಮಹಾರಾಷ್ಟ್ರದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ರಂಗತಜ್ಞರಾಗಿ ಕಾರ್ಯನಿರ್ವಹಿಸಿರುವ ಅವರು, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ನಾಟಕಕಾರ ಪ್ರಶಸ್ತಿ, ಅನುವಾದ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ವರದರಾಜ ಆದ್ಯ ಸ್ಮಾರಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. 'ದಿಶಾಂತರ' ನಾಟಕಕ್ಕೆ 16ಕ್ಕೂ ಅಧಿಕ ಪ್ರಶಸ್ತಿಗಳು ಲಭಿಸಿವೆ.