Ballari | ಕುರುಗೋಡು, ತೆಕ್ಕಲಕೋಟೆಗೆ 100 ಅಡಿ ಅಗಲದ ರಿಂಗ್ ರೋಡ್ ಭಾಗ್ಯ !
ಬಳ್ಳಾರಿ/ಕುರುಗೋಡು : ರಾಜ್ಯದ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದ್ದು, ಬಳ್ಳಾರಿ ಜಿಲ್ಲೆಯ ಕುರುಗೋಡು ಮತ್ತು ತೆಕ್ಕಲಕೋಟೆ ಪಟ್ಟಣಗಳಿಗೆ ಹೊಸದಾಗಿ 100 ಅಡಿ ಅಗಲದ ರಿಂಗ್‌ರೋಡ್ (ವರ್ತುಲ ರಸ್ತೆ) ನಿರ್ಮಿಸಲು ತೀರ್ಮಾನಿಸಿದೆ.
ರಾಜ್ಯ ಸರ್ಕಾರದ ರೋಡ್ ನೆಟ್ವರ್ಕ್ ಗ್ರಿಡ್ ಪ್ಲಾನ್ (Road Network Grid Plan) ಯೋಜನೆಯಡಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ರಾಜ್ಯಾದ್ಯಂತ ಆಯ್ಕೆಗೊಂಡಿರುವ 108 ಪಟ್ಟಣಗಳ ಪಟ್ಟಿಯಲ್ಲಿ ಕುರುಗೋಡು ಮತ್ತು ತೆಕ್ಕಲಕೋಟೆ ಸ್ಥಾನ ಪಡೆದಿವೆ.
ನಗರೀಕರಣದಿಂದ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಐಎಸ್ (GIS) ತಂತ್ರಜ್ಞಾನ ಆಧಾರಿತ ನಕ್ಷೆ ಸಿದ್ಧಪಡಿಸಲಾಗಿದೆ. ಪ್ರತಿಯೊಂದು ಪಟ್ಟಣಕ್ಕೂ ತಲಾ 100 ಅಡಿ ಅಗಲದ ಸುಸಜ್ಜಿತ ವರ್ತುಲ ರಸ್ತೆ ನಿರ್ಮಾಣವಾಗಲಿದೆ.
ಯೋಜನೆಯ ಪ್ರಮುಖ ಅಂಶವಾಗಿ ವರ್ತುಲ ರಸ್ತೆಯ ಸುತ್ತಲಿನ 2 ಕಿಲೋಮೀಟರ್ ವ್ಯಾಪ್ತಿಯನ್ನು ಇಂಪ್ಯಾಕ್ಟ್ ಜೋನ್ ಎಂದು ಘೋಷಿಸಲಾಗುತ್ತದೆ. ಈ ವಲಯದಲ್ಲಿ ಹೊಸ ಮನೆಗಳು ಅಥವಾ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ. ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಉದ್ದೇಶದಿಂದ ಈ ಪ್ರದೇಶವನ್ನು ಹಸಿರು ವಲಯವನ್ನಾಗಿ ಅಭಿವೃದ್ಧಿಪಡಿಸಿ ಕಡ್ಡಾಯವಾಗಿ ಮರಗಳನ್ನು ಬೆಳೆಸುವಂತೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಯೋಜನೆಯಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ಕುರುಗೋಡು ಮತ್ತು ತೆಕ್ಕಲಕೋಟೆ ಸೇರಿದಂತೆ ಎರಡನೇ ಹಾಗೂ ಮೂರನೇ ಹಂತದ ಪಟ್ಟಣಗಳು ಯೋಜಿತ ರೀತಿಯಲ್ಲಿ ಅಭಿವೃದ್ಧಿ ಹೊಂದಲಿವೆ ಎಂದು ಸರ್ಕಾರ ತಿಳಿಸಿದೆ.