ಬಳ್ಳಾರಿ : ‘ಬಳ್ಳಾರಿ ಚಲೋ ಪಾದಯಾತ್ರೆ’ ಸೆ.10ರಂದು ಸಮಾರೋಪಗೊಂಡರೂ ಜನರ ಧ್ವನಿಯಾಗಿ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಬುಧವಾರ ಬಳ್ಳಾರಿ ನಗರ ಪ್ರವೇಶಿಸಿದ ಪಾದಯಾತ್ರೆಯ ವೇಳೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ಬಳ್ಳಾರಿಯ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ, ಮಧ್ಯಾಹ್ನ ವಾಲ್ಮೀಕಿ ವೃತ್ತದಿಂದ ಸಮಾವೇಶದ ಸ್ಥಳದವರೆಗೆ ಪಾದಯಾತ್ರೆ ಸಾಗಲಿದ್ದು, ಸಂಜೆ 4.30ಕ್ಕೆ ಸಮಾರೋಪ ಸಮಾವೇಶ ಆರಂಭವಾಗಲಿದೆ ಎಂದು ತಿಳಿಸಿದರು.

ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ವಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದರು.

ಹತ್ತು ದಿನಗಳ ಪಾದಯಾತ್ರೆ ಮುಕ್ತಾಯವಾಗುತ್ತಿದ್ದರೂ ಇದು ಹೋರಾಟದ ಅಂತ್ಯವಲ್ಲ. ರಾಜ್ಯದಲ್ಲಿ ಜನಪರ ಸರ್ಕಾರಕ್ಕಾಗಿ ಬಿಜೆಪಿ ನಿರಂತರ ಚಳವಳಿ ನಡೆಸಲಿದೆ. ಗ್ಯಾರಂಟಿಗಳ ಹೆಸರಿನಲ್ಲಿ ಸರ್ಕಾರ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ವಿಜಯೇಂದ್ರ ಆರೋಪಿಸಿದರು.

ಪಾದಯಾತ್ರೆ ತಮ್ಮ ರಾಜಕೀಯ ಜೀವನದ ಮಹತ್ವದ ತಿರುವಾಗಿದ್ದು, ಮಹಿಳೆಯರು, ರೈತರು, ಯುವಕರು ಹಾಗೂ ಅಲೆಮಾರಿ ಸಮುದಾಯದವರೊಂದಿಗೆ ನೇರ ಸಂವಾದ ನಡೆಸುವ ಅವಕಾಶ ದೊರೆತಿದೆ. ಅವರ ಸಮಸ್ಯೆಗಳನ್ನು ಹತ್ತಿರದಿಂದ ಅರಿಯಲು ಸಾಧ್ಯವಾಗಿದೆ ಎಂದು ಹೇಳಿದರು.

ನಾಳಿನ ಸಮಾವೇಶಕ್ಕೆ 40ರಿಂದ 50 ಸಾವಿರ ಜನರು ಆಗಮಿಸುವ ನಿರೀಕ್ಷೆಯಿದ್ದು, ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಸಂಜೆ 6.30ರವರೆಗೆ ಸಮಯ ನಿಗದಿಪಡಿಸಿದ್ದರೂ ಹೋರಾಟ ಯಾವಾಗ ಮುಕ್ತಾಯವಾಗಬೇಕು ಎಂಬುದನ್ನು ಜನರೇ ನಿರ್ಧರಿಸುತ್ತಾರೆ ಎಂದು ವಿಜಯೇಂದ್ರ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor