×
Ad

ಬಳ್ಳಾರಿ | ವಿವಿಧ ಇಲಾಖೆಗಳ ಸಹಭಾಗಿತ್ವದೊಂದಿಗೆ ಮಕ್ಕಳ, ಮಹಿಳೆಯರ ಅನೈತಿಕ ಸಾಗಾಣಿಕೆಯನ್ನು ತಡೆಗಟ್ಟಬಹುದು : ರಾಮಕೃಷ್ಣ ನಾಯಕ

Update: 2025-12-18 17:02 IST

ಬಳ್ಳಾರಿ  : ಮಕ್ಕಳು ಮತ್ತು ಮಹಿಳೆಯರು ಅನೈತಿಕ ಸಾಗಾಣಿಕೆಗೆ ಒಳಗಾಗದಂತಹ ಪರಿಣಾಮಕಾರಿಯಾದ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಮೂಲಕ ಅವರನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ ಎಂ. ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಪಂ ಹಳೆಯ ನಝೀರ್ ಸಾಬ್ ಸಭಾಂಗಣದಲ್ಲಿ “ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ ಹಾಗೂ ಐಟಿಪಿಎ, 1956ರ ಕಾಯ್ದೆ” ಕುರಿತು ಜಿಲ್ಲಾ ಮಟ್ಟದ ವಿವಿಧ ಸಹಭಾಗಿದಾರರ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ಗುರುವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಪ್ರತಿಯೊಬ್ಬರಿಗೂ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಿಲ್ಲೆಯ ಎಲ್ಲಾ ನಗರ-ಸ್ಥಳೀಯ ಸಂಸ್ಥೆಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ವಿವಿಧ ಇಲಾಖೆಗಳ ಸಹಭಾಗಿತ್ವದೊಂದಿಗೆ ಮಕ್ಕಳು ಮತ್ತು ಮಹಿಳೆಯರು ಅನೈತಿಕ ಸಾಗಾಣಿಕೆಯನ್ನು ತಡೆಗಟ್ಟಬಹುದಾಗಿದೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಉಮಾದೇವಿ ಅವರು ಮಾತನಾಡಿ, ಪ್ರಸ್ತುತ ಶಾಲೆಗಳಲ್ಲಿ ಮಾನವ ಕಳ್ಳ ಸಾಗಾಣಿಕೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯ ಅವಶ್ಯಕವಾಗಿದೆ. ಮಕ್ಕಳಿಗೆ ಶಾಲೆಯೇ ಸುರಕ್ಷಿತ ಸ್ಥಳವಾಗಿದ್ದು, 7 ದಿನಕ್ಕಿಂತ ಹೆಚ್ಚು ಗೈರಾದಲ್ಲಿ ಅಂತಹ ಮಕ್ಕಳ ಪೋಷಕರನ್ನು ಸಂಪರ್ಕಿಸಿ ಮರಳಿ ಶಾಲೆಗೆ ಕರೆತರಬೇಕು. ಅದರಲ್ಲೂ ಪ್ರೌಢಶಾಲೆಯ ಹೆಣ್ಣುಮಕ್ಕಳ ಮೇಲೆ ನಿರಂತರ ನಿಗಾವಹಿಸಬೇಕು. ಗೈರಾದಲ್ಲಿ ಮಾಹಿತಿ ಸಂಗ್ರಹಿಸಬೇಕು. ಸಹಭಾಗೀದಾರರ ಇಲಾಖೆಗಳ ಅಧಿಕಾರಿಗಳು ಸಹ ಇದಕ್ಕೆ ಕೈಜೋಡಿಸಬೇಕಿದೆ ಎಂದು ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರ ದೇವಿ, ಮಾನವ ಕಳ್ಳ ಸಾಗಾಣಿಕೆ ಮತ್ತು ಕೋರ್ ಕಮಿಟಿಯ ರಾಜ್ಯ ಉನ್ನತಾಧಿಕಾರಿಗಳ ಸಮಿತಿಯ ಸದಸ್ಯ ವಿಲಿಯಂ ಕ್ರಿಸ್ಟೋಫರ್ ಅವರು ಮಾತನಾಡಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಯೋಜನಾಧಿಕಾರಿ ಎ.ಮೌನೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಈಶ್ವರ್ ರಾವ್ ಸೇರಿದಂತೆ ವಿವಿಧ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಸಹಭಾಗಿದಾರರ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಎನ್.ಜಿ.ಒ ಸಂಸ್ಥೆಗಳ ಪದಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News