ಬಳ್ಳಾರಿಗೆ ಮಲತಾಯಿ ಧೋರಣೆ ಅನುಸರಣೆ ಸರಿಯಲ್ಲ : ಶಾಸಕ ನಾರಾ ಭರತ್ ರೆಡ್ಡಿ
ಬೆಳಗಾವಿ(ಸುವರ್ಣಸೌಧ ): ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಇದ್ದರೂ ಸ್ಥಳೀಯ ಯುವಕರಿಗೆ ಉದ್ಯೋಗಗಳು ಸಿಗುತ್ತಿಲ್ಲ. ಬದಲಾಗಿ ಉದ್ಯೋಗ ಅರಸಿ ಯುವಕರು ದೂರದ ಬೆಂಗಳೂರಿಗೆ ಗುಳೆ ಹೋಗುತ್ತಿದ್ದಾರೆ. ಅನ್ಯ ರಾಜ್ಯದವರು ಇಲ್ಲಿ ಕೈಗಾರಿಕೆ ಸ್ಥಾಪಿಸಿ ಸ್ಥಳೀಯರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರ ಕೂಡ ಬಳ್ಳಾರಿ ಜಿಲ್ಲೆಗೆ ಹಲವು ವಿಷಯಗಳಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲವೆಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ ಅತಿ ಹಿಂದುಳಿದ ಜಿಲ್ಲೆಯಾಗಿದೆ. ಸರ್ಕಾರಿ ಅಧಿಕಾರಿಗಳು ಗ್ರೂಪ್ - ಎ ಅಡಿ ಶೇ.65ರಷ್ಟು ಉದ್ಯೋಗಾವಕಾಶ ನೀಡಲಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಗ್ರೂಪ್ - ಬಿ ನಲ್ಲಿ ಶೇ.80, ಗ್ರೂಪ್ - ಸಿ ಮತ್ತು ಡಿ-ನಲ್ಲಿ ಶೇ.100 ರಷ್ಟು ಉದ್ಯೋಗ ನೀಡಿರುವುದಾಗಿ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು. ಬೆಂಗಳೂರಿನ ಯಾವುದೇ ಗಲ್ಲಿಗೆ ಹೋದರೂ ನಮ್ಮ ಬಳ್ಳಾರಿ ಜಿಲ್ಲೆಯ ನಿರುದ್ಯೋಗಿ ಯುವಕರು ಉದ್ಯೋಗಕ್ಕಾಗಿ ಅಲೆದಾಡುತ್ತಿರುವುದನ್ನು ಕಾಣಬಹುದು. ನಾನು ಬೆಂಗಳೂರಿಗೆ ಹೋದಾಗ ಅಣ್ಣ, ನಾನು ನಿಮ್ಮ ಕ್ಷೇತ್ರದವನು, ಕೆಲಸ ಇಲ್ಲದ್ದಕ್ಕೆ ಇಲ್ಲಿಗೆ ಬಂದಿದ್ದೇನೆ ಎನ್ನುತ್ತಾರೆ. ಇದು ನನಗೆ ನಿಜಕ್ಕೂ ಅಳು ತರಿಸುವ ವಿಚಾರ ಎಂದು ತಿಳಿಸಿದರು.
ಬೆಂಗಳೂರಿನಂತಹ ಮಹಾನಗರಗಳಲ್ಲಿ ನಮ್ಮ ಜಿಲ್ಲೆಯ ಯುವಕರು ಡೆಲಿವರಿ ಬಾಯ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತ ನಮ್ಮ ಬಳ್ಳಾರಿ ಜಿಲ್ಲೆಯ ಭೂಮಿ, ನೆಲ, ನೀರು ಇತ್ಯಾದಿ ಭೌಗೋಳಿಕ ಸಂಪನ್ಮೂಲ ಬಳಸಿಕೊಂಡು ಸ್ಥಾಪನೆಯಾದ ಕೈಗಾರಿಕೆಗಳು ಅನ್ಯ ರಾಜ್ಯದ ಯುವಕರಿಗೆ ಪ್ರಾಧಾನ್ಯತೆ ನೀಡುತ್ತಿವೆ. 1 ಸಾವಿರ ಉದ್ಯೋಗಗಳಲ್ಲಿ ನೇರ ನೇಮಕಾತಿಯನ್ನು 100 ಯುವಕರಿಗೆ ನೀಡಿದರೆ, ಉಳಿದ ಉದ್ಯೋಗಗಳು ಗುತ್ತಿಗೆ ಆಧಾರದ ಮೇಲೆ ನೇಮಕವಾಗುತ್ತಿವೆ. ಧೂಳು ತಿಂದು ಅನಾರೋಗ್ಯಕ್ಕೆ ಈಡಾಗುವವರು ನಾವುಗಳಾದರೆ, ಕೈಗಾರಿಕೆ ಸ್ಥಾಪಿಸಿ ಜನರನ್ನು ಗೋಳು ಹೊಯ್ದುಕೊಳ್ಳುವುದು ಉದ್ಯಮಿಗಳ ಕೆಲಸವಾಗಿದೆ. ಬಳ್ಳಾರಿ ಜಿಲ್ಲೆಯ ಜನರಿಗೆ ಅನ್ಯಾಯವಾದರೆ ಸದನದಲ್ಲಿ ಯಾರೂ ಧ್ವನಿಯಾಗುವುದಿಲ್ಲ. ಅದೇ ಬೆಂಗಳೂರು-ಮೈಸೂರು ಭಾಗದಲ್ಲಿ ಅನ್ಯಾಯವಾದರೆ ಇಡೀ ಸದನವೇ ಕೋಲಾಹಲಗೊಳ್ಳುತ್ತದೆ. ಈ ತಾರತಮ್ಯ ಬಿಡಬೇಕು. ಯುವ ಜನತೆಗೆ ಅನ್ಯಾಯವಾಗಲು ಬಿಡಬಾರದು. ಎಲ್ಲರಿಗೂ ಉದ್ಯೋಗಾವಕಾಶಗಳು ಲಭಿಸಬೇಕು. ಈ ದಿಸೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಜೆಸ್ಕಾಂ ನಿಂದ ಅದಾಲತ್ ನಡೆಸಿ :
ನನ್ನ ಕ್ಷೇತ್ರದಲ್ಲಿ ಶೇ.90 ರಷ್ಟು ಸ್ಲಂ ಪ್ರದೇಶವಿದೆ. ಇಲ್ಲಿ ವಾಸಿಸುವ ಜನರಿಗೆ ಕನಿಷ್ಟ ವಿದ್ಯುತ್ ಬಿಲ್ ಪಾವತಿಸಲೂ ಸಾಧ್ಯವಾಗದ ಸ್ಥಿತಿ ಇತ್ತು. ಅಧಿಕಾರಿಗಳು ವಿದ್ಯುತ್ ಬಿಲ್ ಗೆ ಬಡ್ಡಿ, ಚಕ್ರಬಡ್ಡಿ ಹಾಕಿದ್ದರಿಂದ ಮನೆ ಮನೆಗೆ 70 ಸಾವಿರ ರೂ. ನಿಂದ 80 ಸಾವಿರ ರೂ.ವರೆಗೆ ವಿದ್ಯುತ್ ಬಿಲ್ ನೀಡಿ, ಅದನ್ನು ಪಾವತಿಸುವಂತೆ ಒತ್ತಡ ತರಲಾಗುತ್ತಿದೆ. ಸ್ಲಂ ನಲ್ಲಿ ವಾಸಿಸುವ ಬಡವರು ಅಷ್ಟೊಂದು ದೊಡ್ಡ ಮೊತ್ತ ಹಣ ಇರುವ ಬಿಲ್ ಪಾವತಿಸುವುದು ಹೇಗೆ ಸಾಧ್ಯ? ಎಂದ ಅವರು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು ವಿದ್ಯುತ್ ಬಿಲ್ ಪಾವತಿಸಲು ಬಡ್ಡಿ ಮನ್ನಾ ಮಾಡಬೇಕು. ಅಸಲು ಕಟ್ಟಲು ಅದಾಲತ್ ನಡೆಸಬೇಕು. ವಿದ್ಯುತ್ ಬಿಲ್ ಪಾವತಿಸಲು ಕನಿಷ್ಟ 6 ತಿಂಗಳು ಕಾಲಾವಕಾಶ ನೀಡಬೇಕು. ಅಧಿಕಾರಿಗಳು ವಿದ್ಯುತ್ ಮೀಟರ್ ಕಿತ್ತುಕೊಂಡು ಹೋಗದಂತೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು.
ಡಿಎಂಎಫ್ ಫಂಡ್ ಬಳಕೆಗೆ ಅನುಮತಿ ಕೊಡಿ :
ನಮ್ಮದೇ ಜಿಲ್ಲೆಯ ಸಂಪನ್ಮೂಲ ಬಳಸಿ ಜಿಲ್ಲಾ ಖನಿಜ ನಿಧಿ ಸ್ಥಾಪಿಸಲಾಗಿದೆ. ಅದರಲ್ಲಿ ಹೇರಳವಾದ ಹಣ ಇದ್ದರೂ ನಮ್ಮ ಜಿಲ್ಲೆಗೆ ಬಳಕೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಸರ್ಕಾರ ಅನುದಾನ ನೀಡದೇ ಇದ್ದರೂ ಚಿಂತೆ ಇಲ್ಲ, ನಮ್ಮದೇ ಜಿಲ್ಲೆಯ ಡಿ.ಎಂ.ಎಫ್. ಅಡಿ ಬಳ್ಳಾರಿ ನಗರ, ಗ್ರಾಮೀಣ ಸೇರಿದಂತೆ ಎಲ್ಲ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ತಲಾ 200 ಕೋಟಿ ರೂ. ಹಣ ಬಳಕೆ ಮಾಡಲು ಅವಕಾಶ ನೀಡಬೇಕು. ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಇನ್ನಾದರೂ ನಮ್ಮ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಡಿ.ಎಂ.ಎಫ್.ನಲ್ಲಿ ಹಣ ಬಳಕೆ ಮಾಡಲು ಅವಕಾಶ ನೀಡಬೇಕೆಂದು ಶಾಸಕ ನಾರಾ ಭರತ್ ರೆಡ್ಡಿ ಕೋರಿದರು.