ಬಳ್ಳಾರಿ: ರಾಜ್ಯದಲ್ಲಿ 45 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ, ಸರ್ಕಾರದ ನೀತಿಯನ್ನು ಖಂಡಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ನೇತೃತ್ವದಲ್ಲಿ ಶುಕ್ರವಾರ ನಗರದ ಒಪಿಡಿ ವೃತ್ತದ ಬಳಿ ಪ್ರತಿಭಟನೆ ನಡೆಯಿತು.

ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲೆಗಳನ್ನು ಉಳಿಸುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ‘ಕೆಪಿಎಸ್ ಮ್ಯಾಗ್ನೆಟ್’ ಯೋಜನೆಯ ಹೆಸರಿನಲ್ಲಿ 45 ಸಾವಿರ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಈ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ-2020) ಜಾರಿಗೊಳಿಸುತ್ತಿದೆ. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ (ಎಡಿಬಿ) ಪಡೆದ ಸಾಲಕ್ಕೆ ಸಂಬಂಧಿಸಿದ ಪತ್ರದಲ್ಲಿ ಈ ವಿಷಯ ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಉಪಾಧ್ಯಕ್ಷೆ ಎಸ್.ಜಿ.ನಾಗರತ್ನ ಮಾತನಾಡಿ, ಸರ್ಕಾರದ ಈ ನೀತಿಯಿಂದಾಗಿ ರಾಜ್ಯದಲ್ಲಿ ಕೇವಲ 4,038 ಶಾಲೆಗಳು ಮಾತ್ರ ಉಳಿದು, ಉಳಿದ 45 ಸಾವಿರ ಶಾಲೆಗಳು ಮುಚ್ಚುವ ಹಂತ ತಲುಪಲಿವೆ. ಪ್ರಸ್ತುತ ಶಿಕ್ಷಣ ನೀತಿಯನ್ನು ರಾಜ್ಯದ ತಜ್ಞರಾಗಲಿ, ಬುದ್ಧಿಜೀವಿಗಳಾಗಲಿ ನಿರ್ಧರಿಸುತ್ತಿಲ್ಲ. ಬದಲಿಗೆ ಎಡಿಬಿ ಮತ್ತು ಕಾರ್ಪೊರೇಟ್ ಕಂಪನಿಗಳು ನಿರ್ಧರಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಈರಣ್ಣ, ಕಾರ್ಯದರ್ಶಿ ಕಂಬಳಿ ಮಂಜುನಾಥ, ಉಪಾಧ್ಯಕ್ಷೆ ಎಂ.ಶಾಂತಿ, ಜಿಲ್ಲಾ ಖಜಾಂಚಿ ಅನುಪಮಾ, ಕಚೇರಿ ಕಾರ್ಯದರ್ಶಿ ನಿಹಾರಿಕ, ಸದಸ್ಯರಾದ ಕಾಂತೇಶ್, ತಿಪ್ಪೇಸ್ವಾಮಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor