ಸಿರುಗುಪ್ಪ: ಸಾರ್ವಜನಿಕ ಸೇವೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕೆಲಸಗಳಲ್ಲಿ ವಿಳಂಬ ಧೋರಣೆ ತೋರುವ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ, ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಬೆಂಗಳೂರು ಲೋಕಾಯುಕ್ತ ಪೊಲೀಸ್ ಉಪನಿರೀಕ್ಷಕ (ಪಿಎಸ್‌ಐ) ನಿರಂಜನ ಪಾಟೀಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಅವರು, ಸಿಬ್ಬಂದಿಯ ಹಾಜರಾತಿ ಹಾಗೂ ಕರ್ತವ್ಯ ನಿರ್ವಹಣೆಯನ್ನು ಪರಿಶೀಲಿಸಿ ಮಾತನಾಡಿದರು.

ಪಟ್ಟಣದಲ್ಲಿ ಒಟ್ಟು 7,300 ಆಸ್ತಿಗಳಿದ್ದು, ಕೇವಲ 3,600 ಆಸ್ತಿದಾರರಿಂದ ಮಾತ್ರ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಉಳಿದ ಶೇ.69ರಷ್ಟು ಆಸ್ತಿಗಳಿಂದ ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಳ್ಳದಿರುವುದು ಕರ್ತವ್ಯಲೋಪವಾಗಿದೆ. ಎಲ್ಲ ಆಸ್ತಿಗಳನ್ನು ಖಾತೆ ವ್ಯಾಪ್ತಿಗೆ ತಂದು ತೆರಿಗೆ ವಸೂಲಿ ಮಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇ-ಸ್ವತ್ತು ವಿಳಂಬಕ್ಕೆ ತರಾಟೆ :

ಇ-ಸ್ವತ್ತು ಅರ್ಜಿಗಳ ವಿಲೇವಾರಿಗೆ ಎರಡು-ಮೂರು ತಿಂಗಳು ತೆಗೆದುಕೊಳ್ಳುತ್ತಿರುವುದೇಕೆ? ನಮೂನೆ-3 ನೀಡಲು ಸಾರ್ವಜನಿಕರನ್ನು ಅನಗತ್ಯವಾಗಿ ಅಲೆದಾಡಿಸುವುದು ಸರಿಯಲ್ಲ. ಅರ್ಜಿಯನ್ನು ತಿರಸ್ಕರಿಸಿದರೆ ಒಂದು ವಾರದೊಳಗೆ ಕಾರಣ ಸಹಿತ ಪತ್ರ ನೀಡಬೇಕು. ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳುವುದು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ ಎಂದು ಕಂದಾಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಅನುಮತಿರಹಿತ ಬಡಾವಣೆಗಳ ಕುರಿತು ವಿಚಾರಣೆ :

ಹಿಂದೆ ಎನ್‌ಎ ಮಾಡಿಸದ ಬಡಾವಣೆಗಳಿಗೆ ವಿದ್ಯುತ್, ನೀರು ಹಾಗೂ ರಸ್ತೆ ಸೌಲಭ್ಯಗಳನ್ನು ಒದಗಿಸಿ, ಈಗ ಹಕ್ಕುಪತ್ರದ ನೆಪದಲ್ಲಿ ಇ-ಸ್ವತ್ತು ನೀಡುವುದನ್ನು ತಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದರು. ಬಡಾವಣೆಗಳ ಅನುಮೋದನೆ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗಳನ್ನು ಪಂಚಾಯಿತಿಗೆ ಸೇರ್ಪಡೆಗೊಳಿಸದಿರುವುದು ಲೋಪವಾಗಿದೆ ಎಂದು ಮುಖ್ಯಾಧಿಕಾರಿ ಪರಶುರಾಮ ಅವರನ್ನು ಪ್ರಶ್ನಿಸಿದರು. 1ನೇ ವಾರ್ಡ್‌ನ ಶಾಬಾದಿ ಬಡಾವಣೆಯ ಪರವಾನಗಿ ಹಾಗೂ ಅನಧಿಕೃತ ನಿರ್ಮಾಣಗಳ ವಸೂಲಿ ಕ್ರಮದ ವಿವರಗಳನ್ನು ಕೇಳಿದರು.

ಇದೇ ವೇಳೆ ಪಂಚಾಯಿತಿಯ 11 ವಾಹನಗಳ ನಿರ್ವಹಣಾ ವೆಚ್ಚ ಹಾಗೂ ಗ್ರಾಮಠಾಣಾ ವ್ಯಾಪ್ತಿಯ 11 ಬಡಾವಣೆಗಳ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor