Ballari | ಗೆಣತಿಕಟ್ಟೆ ಗ್ರಾಮದಲ್ಲಿ ‘ಬಾಗಿಲಿಗೆ ಬಂತು ಸರ್ಕಾರ’ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ
ಸಂಡೂರು/ಬಳ್ಳಾರಿ: ಗ್ರಾಮೀಣ ಜನರಿಗೆ ಸರ್ಕಾರಿ ಸೇವೆಗಳನ್ನು ಅವರ ಮನೆ ಬಾಗಿಲಿಗೇ ತಲುಪಿಸುವ ಉದ್ದೇಶದಿಂದ ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆಣತಿಕಟ್ಟೆ ಗ್ರಾಮದಲ್ಲಿ ‘ಬಾಗಿಲಿಗೆ ಬಂತು ಸರ್ಕಾರ–ಸೇವೆಗೆ ಇರಲಿ ಸಹಕಾರ’ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ನಡೆಯಿತು.
ತಹಶೀಲ್ದಾರ್ ಹಾಗೂ ದಂಡಾಧಿಕಾರಿ ಜಿ. ಅನಿಲ್ ಕುಮಾರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನಬಸಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಸೇವೆಗಳು, ಜನಕಲ್ಯಾಣ ಯೋಜನೆಗಳು ಹಾಗೂ ಸಕಾಲ ಯೋಜನೆಯಡಿ ದೊರೆಯುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಯಿತು. ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಿ, ಸಂಬಂಧಿಸಿದ ಇಲಾಖೆಗಳ ಮೂಲಕ ಪರಿಹಾರ ಕಲ್ಪಿಸುವ ಕ್ರಮ ಕೈಗೊಳ್ಳಲಾಯಿತು.
ಒಟ್ಟು 69 ಅರ್ಜಿಗಳು ಸ್ವೀಕೃತವಾಗಿದ್ದು, ಕಂದಾಯ ಇಲಾಖೆಗೆ 49, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 13, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 3, ಇಂಧನ ಇಲಾಖೆಗೆ 2, ವಸತಿ ಇಲಾಖೆಗೆ 1 ಹಾಗೂ ಸಾರಿಗೆ ಇಲಾಖೆಗೆ 1 ಅರ್ಜಿ ಸಲ್ಲಿಕೆಯಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಸಿಡಿಪಿಒ ನಾಗರಾಜ್, ಪಶುವೈದ್ಯಾಧಿಕಾರಿ ಡಾ. ವಲಿಬಾಷಾ, ಸಮಾಜ ಕಲ್ಯಾಣಾಧಿಕಾರಿ ವೆಂಕಟೇಶ್, ಪಿಎಂ ಪೋಷಣ್ ಸಹಾಯಕ ನಿರ್ದೇಶಕ ಶ್ರೀಧರ್ ಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.