Ballari | ಬಾಕಿ ಪಿಂಚಣಿ, ಮಾಸಾಶನ ಬಿಡುಗಡೆಗೆ ಬಿಜೆಪಿ ಎಸ್‌ಸಿ ಮೋರ್ಚಾದಿಂದ ಆಗ್ರಹ
ಬಳ್ಳಾರಿ/ಕಂಪ್ಲಿ : ಕಳೆದ ನಾಲ್ಕು ತಿಂಗಳಿಂದ ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಹಾಗೂ ಮಾಸಾಶನಗಳು ಫಲಾನುಭವಿಗಳಿಗೆ ದೊರೆಯದೆ ಸಂಕಷ್ಟ ಉಂಟಾಗಿದ್ದು, ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಕಂಪ್ಲಿ ತಾಲ್ಲೂಕು ಮಂಡಲ ಪದಾಧಿಕಾರಿಗಳು ಆಗ್ರಹಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಉದ್ದೇಶಿಸಿ ಬರೆದ ಮನವಿಯನ್ನು ಗುರುವಾರ ತಹಶೀಲ್ದಾರ್ ಜೂಗಲ್ ಮಂಜುನಾಯಕ ಅವರಿಗೆ ಸಲ್ಲಿಸಿದರು.
ಬಳಿಕ ಮಾತನಾಡಿದ ಬಿಜೆಪಿ ಎಸ್‌ಸಿ ಮೋರ್ಚಾ ತಾಲ್ಲೂಕು ಮಂಡಲ ಅಧ್ಯಕ್ಷ ಸಿ.ಎ. ಚನ್ನಪ್ಪ, ವಿವಿಧ ಪಿಂಚಣಿ ಮತ್ತು ಮಾಸಾಶನಗಳು ಸಕಾಲಕ್ಕೆ ದೊರೆಯದ ಪರಿಣಾಮ ಫಲಾನುಭವಿಗಳು ಔಷಧೋಪಚಾರ ಹಾಗೂ ದೈನಂದಿನ ಅಗತ್ಯ ವೆಚ್ಚಗಳನ್ನು ಭರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಬಾಕಿ ಇರುವ ಪಿಂಚಣಿ ಮತ್ತು ಮಾಸಾಶನವನ್ನು ಕೂಡಲೇ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಗೊರ್ತಿ ಶ್ರೀನಿವಾಸಲು, ಚೇತನ್ ಕುಮಾರ್, ಎಸ್.ಆರ್. ಕಾರ್ತಿಕ್, ಯಶ್ವಂತ್, ರಮೇಶ್, ಮಹೇಂದ್ರ, ತೇಜ, ರವಿಚಂದ್ರ, ಜಿ.ಬಿ. ಮಂಜುನಾಥ, ರವಿ ಮಡಿವಾಳ, ಎಂ. ರಾಜಶೇಖರ್, ಎಂ. ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.