ಸಿರುಗುಪ್ಪ | ಅಕ್ರಮ ಗ್ರಾವೆಲ್ ಗಣಿಗಾರಿಕೆ ಆರೋಪಿಸಿ ರೈತರ ಪ್ರತಿಭಟನೆ
ಸಿರುಗುಪ್ಪ : ತಾಲೂಕಿನ ಕೊಂಚಿಗೇರಿ ಗ್ರಾಮದ ಸಮೀಪದ ಹಾಗಲೂರು ಗ್ರಾಮ ವ್ಯಾಪ್ತಿಯ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಗ್ರಾವೆಲ್ (ಮರಂ) ಗಣಿಗಾರಿಕೆ ಹಾಗೂ ಸಾಗಾಣಿಕೆ ನಡೆಯುತ್ತಿದೆ ಎಂದು ಆರೋಪಿಸಿ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಕೋನಪ್ಪ ಎಚ್. ಮಾತನಾಡಿ, ಅಧಿಕಾರಿಗಳ ಸಹಕಾರದಿಂದಲೇ ಅಕ್ರಮ ಗ್ರಾವೆಲ್ ಸಾಗಾಣಿಕೆ ನಡೆಯುತ್ತಿದೆ. ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ರೈತರ ಸಾಗುವಳಿ ಜಮೀನಿನಲ್ಲೇ ರಸ್ತೆ ನಿರ್ಮಿಸಿ ರಾಜಾರೋಷವಾಗಿ ಟಿಪ್ಪರ್‌ಗಳ ಸಂಚಾರ ನಡೆಸಲಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.
ಗ್ರಾಮಸ್ಥ ದಾಸರ ರುದ್ರಯ್ಯ ಮಾತನಾಡಿ, ಅರಣ್ಯ ಭೂಮಿಯಲ್ಲಿ ನೂರಾರು ಮರಗಳನ್ನು ಕಡಿದು ರಸ್ತೆ ನಿರ್ಮಿಸಲಾಗಿದೆ. ಗ್ರಾವೆಲ್ ತೆಗೆಯಲು ಪಡೆದಿರುವ ಅನುಮತಿ ಒಂದಾಗಿದ್ದು, ಸ್ಥಳದಲ್ಲಿ ನಡೆಯುತ್ತಿರುವ ಚಟುವಟಿಕೆ ಸಂಪೂರ್ಣ ಭಿನ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮಹಿಳೆಯರಾದ ಉಮಾದೇವಿ ಮತ್ತು ಭಾಗ್ಯ ಮಾತನಾಡಿ, ಅಕ್ರಮ ಗಣಿಗಾರಿಕೆ ಕುರಿತು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಡಿಆರ್‌ಎಫ್ ಸಿಬ್ಬಂದಿ ಬಸವನಗೌಡ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಚಿತ್ರೀಕರಣ ನಡೆಸಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕುರುಬರ ರಮೇಶ, ಪಿ. ರಾಜಕುಮಾರ, ಈಡಿಗರ ರುದ್ರಯ್ಯ, ಹರಿಜನ ನಾಗೇಶಪ್ಪ, ದಾಸರ ಬಸವರಾಜ, ಕುರುಬರ ಕೊಂಚಗೇರಪ್ಪ, ಈಡಿಗರ ವೀರೇಶ, ಎಚ್. ಹುಲೆಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.