×
Ad

ಬಳ್ಳಾರಿ | ಊರು ಹಬ್ಬ, ಜಾತ್ರೆ-ಉತ್ಸವಗಳಲ್ಲಿ ಆರೋಗ್ಯದ ಕಾಳಜಿ ವಹಿಸಿ : ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು

Update: 2025-12-30 21:58 IST

ಬಳ್ಳಾರಿ,ಡಿ.30: ಸಾರ್ವಜನಿಕರು ಊರು ಹಬ್ಬ, ಜಾತ್ರೆ-ಉತ್ಸವ ಮುಂತಾದ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಜನತೆಯು ಕುಡಿಯಲು ಶುದ್ಧ ನೀರು ಬಳಸಬೇಕು. ಸೇವಿಸುವ ಆಹಾರ ಸಂಪೂರ್ಣವಾಗಿ ಬೇಯಿಸಿ ಸೇವಿಸುವ ಮೂಲಕ ಸಂಭಾವ್ಯ ವಾಂತಿ ಬೇಧಿ ಪ್ರಕರಣಗಳು ಸಂಭವಿಸದಂತೆ ಆರೋಗ್ಯ ಇಲಾಖೆಯ ಜೊತೆಗೆ ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ.

ಗ್ರಾಮ-ಪಟ್ಟಣಗಳಲ್ಲಿ ನಡೆಯುವ ಎಲ್ಲಾ ಜಾತ್ರೆಗಳು, ಉತ್ಸವಗಳು ಮತ್ತು ಉರುಸುಗಳಲ್ಲಿನ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕು ಹಾಗೂ ಆರೋಗ್ಯ ಇಲಾಖೆಯ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಜಾತ್ರೆಗಳು, ಉತ್ಸವಗಳು ಮತ್ತು ಉರುಸುಗಳು ನಡೆಯುವ ಪ್ರದೇಶದಲ್ಲಿ ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗುವುದು. ಅಗತ್ಯ ಔಷಧಿ ದಾಸ್ತಾನುಗಳೊಂದಿಗೆ ಕರ್ತವ್ಯ ನಿರ್ವಹಿಸಲು ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗುವುದು. ದೊಡ್ಡ ಜಾತ್ರೆಗಳಲ್ಲಿ ತಾತ್ಕಾಲಿಕ ಆಸ್ಪತ್ರೆ ಪ್ರಾರಂಭಿಸಲಾಗುವುದು. ಕ್ಲೋರೋಸ್ಕೋಪ್ ಮೂಲಕ ಕುಡಿಯುವ ನೀರನ್ನು ಪರೀಕ್ಷೆ ಮಾಡಿ ನೀರು ಕುಡಿಯಲು ಯೋಗ್ಯವಿದೆ ಎಂದು ಖಾತರಿ ಪಡಿಸಿದ ನಂತರ ಕುಡಿಯಲು ಸರಬರಾಜು ಮಾಡಲು ತಿಳಿಸಲಾಗುವುದು ಎಂದಿದ್ದಾರೆ.

ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಸ್ವಚ್ಚ ಹಾಗೂ ಶುದ್ಧ ಕ್ಲೋರಿನೇಷನ್ ಮಾಡಿದ ನೀರನ್ನು ನಿಗದಿತ ಸ್ಥಳಗಳಲ್ಲಿ ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಲು ತಿಳಿಸಲಾಗುವುದು. ದೇವಸ್ಥಾನದ ಸುತ್ತ ಮುತ್ತಲಿನ ಆವರಣ ಪರಿಶೀಲನೆ ಮಾಡಿ ಕಸದ ವಿಲೇವಾರಿಗಾಗಿ ಕಸದ ಬುಟ್ಟಿಗಳ ವ್ಯವಸ್ಥೆ ಮಾಡುವ ಮೂಲಕ ನೈರ್ಮಲ್ಯ ಕಾಪಾಡಿಕೊಳ್ಳುವುದರ ಕುರಿತು ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‌ ಅಧಿಕಾರಿಗಳು/ಸಿಬ್ಬಂದಿಗಳು ಕ್ರಮ ವಹಿಸುವರು ಎಂದಿದ್ದಾರೆ.

ಜಾತ್ರೆಯಲ್ಲಿ ತೆರೆದಿಟ್ಟ ಸಿಹಿ ಪದಾರ್ಥ, ಕತ್ತರಿಸಿ ತೆರೆದಿಟ್ಟ ಹಣ್ಣುಗಳನ್ನು ಮುಚ್ಚಿಟ್ಟು ಮಾರಾಟ ಮಾಡದಂತೆ ಕ್ರಮ ವಹಿಸಲಾಗಿದೆ. ಜಾತ್ರೆ-ಹಬ್ಬದ ಬಳಿಕ ತ್ಯಾಜ್ಯವನ್ನು ವಿಲೇವಾರಿ ಮಾಡಲು ನಿರ್ದೇಶಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News