Ballari | ಯುವಕರಲ್ಲಿ ನಾಯಕತ್ವ ಬೆಳೆಸಲು ‘ಭಾರತ್ ಜೋಡೋ ಯುವ ಸಂಘ’ಗಳ ರಚನೆ : ಮಡಗಿನ ಬಸಪ್ಪ

Update: 2026-08-18 20:04 IST

ಸಂಡೂರು/ಬಳ್ಳಾರಿ: ಗ್ರಾಮೀಣ ಪ್ರದೇಶಗಳ ಯುವಜನರನ್ನು ಸಂಘಟಿಸಿ, ಅವರಲ್ಲಿ ಜವಾಬ್ದಾರಿಯುತ ನಾಗರಿಕತ್ವ, ಸಾಮಾಜಿಕ ಬದ್ಧತೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಹ್ಯಾರಿಸ್ ಸುಮೇರ್ ಅವರ ನಿರ್ದೇಶನದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ರಚಿಸಲಾಗುತ್ತಿದೆ. ಸಂಘಗಳ ಮೂಲಕ ಯುವಜನರನ್ನು ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ, ಪರಿಸರ ಹಾಗೂ ಸಮುದಾಯಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದರು.

ಯುವಕರಲ್ಲಿ ದೇಶಭಕ್ತಿ, ಸಂವಿಧಾನಾತ್ಮಕ ಮೌಲ್ಯಗಳು, ಜವಾಬ್ದಾರಿಯುತ ನಾಗರಿಕತ್ವ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಮನೋಭಾವ ಬೆಳೆಸುವುದು ಸಂಘಗಳ ಪ್ರಮುಖ ಉದ್ದೇಶವಾಗಿದೆ. ಯುವಜನರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗ್ರಾಮ ಹಾಗೂ ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಸ್ವಚ್ಛತಾ ಅಭಿಯಾನ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜಾಗೃತಿ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಗಳ ಮೂಲಕ ನಡೆಸಲು ಉದ್ದೇಶಿಸಲಾಗಿದೆ. ಸಂಘಗಳ ಕಾರ್ಯನಿರ್ವಹಣೆಗೆ ಘಟಕ ಆಡಳಿತ ಹಾಗೂ ಕಾರ್ಯಕಾರಿ ಸಮಿತಿಯ ವ್ಯವಸ್ಥೆಯನ್ನೂ ರೂಪಿಸಲಾಗಿದ್ದು, ಯುವಕರ ಸಕ್ರಿಯ ಭಾಗವಹಿಸುವಿಕೆಗೆ ಆದ್ಯತೆ ನೀಡಲಾಗಿದೆ ಎಂದರು.

ತಾಲೂಕಿನ ಗ್ರಾಮಗಳ ಯುವಕರು ತಮ್ಮ ಸಮೀಪದ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಭಾರತ್ ಜೋಡೋ ಯುವ ಸಂಘದ ರಚನೆ ಹಾಗೂ ಸದಸ್ಯತ್ವದ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದು ಮಡಗಿನ ಬಸಪ್ಪ ಮನವಿ ಮಾಡಿದರು.

ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಗಳೊಂದಿಗೆ ಕೈಜೋಡಿಸಿ, ಗ್ರಾಮಾಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News