Ballari | ಮೌಲಾನಾ ಆಝಾದ್ ಮಾದರಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ

Update: 2026-08-16 20:33 IST

ಬಳ್ಳಾರಿ/ಕಂಪ್ಲಿ: ಮುಸ್ಲಿಂ ಸಮಾಜದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಕಂಪ್ಲಿ ಸೇರಿದಂತೆ ಕ್ಷೇತ್ರದಲ್ಲಿ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಜೆ.ಎನ್. ಗಣೇಶ್ ಹೇಳಿದರು.

ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಗ್ರಾಪಂ ಆವರಣದಲ್ಲಿ 2025–26ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಯೋಜನೆಯಡಿ 4.27 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲೆ ಕಟ್ಟಡದ ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕಂಪ್ಲಿ–ಕುರುಗೋಡು ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 14 ಕೋಟಿ ರೂ. ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಿಸಲಾಗಿದೆ. ಇದೀಗ 4.27 ಕೋಟಿ ರೂ. ವೆಚ್ಚದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಕ್ಷೇತ್ರದಲ್ಲಿ ಶಾದಿಮಹಾಲ್, ಖಬರಸ್ತಾನ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹೆಚ್.ವೀರಾಪುರದಲ್ಲಿ 10 ಎಕರೆ ಪ್ರದೇಶದಲ್ಲಿ ಸುಮಾರು 25–30 ಕೋಟಿ ರೂ. ವೆಚ್ಚದಲ್ಲಿ ಸಂತ ಶಿಶುನಾಳ ಶರೀಫ್ ಶಾಲೆ ನಿರ್ಮಿಸಲು ಉದ್ದೇಶಿಸಲಾಗಿದೆ. ಶಿಕ್ಷಣದಿಂದ ವಂಚಿತರಾಗಿರುವ ಮುಸ್ಲಿಂ ಸಮುದಾಯದ ಮಕ್ಕಳ ಶೈಕ್ಷಣಿಕ ಮಟ್ಟ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಹೇಳಿದರು.

ನಂತರ ಮಿನಿ ವಿಧಾನಸೌಧದ ಬಳಿಯಲ್ಲಿ ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆಯಡಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಕಾಂಪೌಂಡ್ ಗೋಡೆ, ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರುಗಳಾದ ಸೈಯದ್ ಷಾ ಅಬುಲ್ ಹಸನ್ ಖಾದ್ರಿ, ಡಾ. ನೂರ್ ಸಾಹೇಬ್ ಸೈಯದ್ ಉಮೇಸ್ ಖಾದ್ರಿ, ಸೈಯದ್ ಷಾ ಆಶ್ವ ಖಾದ್ರಿ, ಎಪಿಎಂಸಿ ಅಧ್ಯಕ್ಷ ಹಬೀಬ್ ರಹೆಮಾನ್, ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಪ್ರಧಾನ ಕಾರ್ಯದರ್ಶಿ ರಘುನಾಯಕ ಸೇರಿದಂತೆ ವಿವಿಧ ಮುಖಂಡರು, ಅಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News