Ballari | ಅಂಕಮ್ಮನಹಾಳ್ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ; 411 ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷೆ

Update: 2026-08-04 19:52 IST

ಸಂಡೂರು/ಬಳ್ಳಾರಿ, ಆ.5: ಬಲ್ಡೋಟಾ ಸಮೂಹದ ಸಿಎಸ್‌ಆರ್ ಕಾರ್ಯಕ್ರಮದಡಿ ಜಾರಿಯಲ್ಲಿರುವ ಬಲ್ಡೋಟಾ ಆರೋಗ್ಯ ಮಿತ್ರ ಯೋಜನೆ 2026–27ರ ಅಂಗವಾಗಿ, ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಂಡೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಅಂಕಮ್ಮನಹಾಳ್‌ನ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಶಾಲಾ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಯಿತು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವುದು, ಆರಂಭಿಕ ಹಂತದಲ್ಲಿಯೇ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚುವುದು ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ ಡಾ. ಎಂ.ಡಿ. ಸಾಜಿದ್ ಹಾಗೂ ಡಾ. ವೈಶಾಕಿನಿ ನೇತೃತ್ವದ ವೈದ್ಯಕೀಯ ತಂಡವು ವಿದ್ಯಾರ್ಥಿಗಳ ಸಾಮಾನ್ಯ ಆರೋಗ್ಯ, ಎತ್ತರ, ತೂಕ, ಕಣ್ಣು, ಕಿವಿ, ಬಾಯಿ ಹಾಗೂ ದೈಹಿಕ ಬೆಳವಣಿಗೆಯ ಸಮಗ್ರ ತಪಾಸಣೆ ನಡೆಸಿತು. ಆರೋಗ್ಯ ಸಮಸ್ಯೆ ಕಂಡುಬಂದ ಮಕ್ಕಳಿಗೆ ವೈದ್ಯಕೀಯ ಸಲಹೆ ನೀಡಿ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರನ್ನು ಸಂಬಂಧಿತ ಆರೋಗ್ಯ ಕೇಂದ್ರಗಳಿಗೆ ಉಲ್ಲೇಖಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಮಕ್ಕಳ ಉತ್ತಮ ಆರೋಗ್ಯವೇ ದೇಶದ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಆರೋಗ್ಯ ಶಿಬಿರಗಳು ಅತ್ಯಂತ ಉಪಯುಕ್ತವಾಗಿವೆ ಎಂದು ಹೇಳಿದರು.

ಶಿಬಿರದಲ್ಲಿ ಒಟ್ಟು 411 ವಿದ್ಯಾರ್ಥಿಗಳು ಆರೋಗ್ಯ ತಪಾಸಣೆಗೆ ಒಳಗಾಗಿ ಪ್ರಯೋಜನ ಪಡೆದರು. ಮಕ್ಕಳಲ್ಲಿ ಆರೋಗ್ಯಕರ ಜೀವನಶೈಲಿ ಮತ್ತು ಉತ್ತಮ ಆರೋಗ್ಯ ಅಭ್ಯಾಸಗಳ ಕುರಿತು ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಎಂಎಸ್‌ಪಿಎಲ್‌ನ ಸಿಎಸ್‌ಆರ್ ವಿಭಾಗದ ಜಿಎಂ ರಾಮಬಾಬು, ಸಮುದಾಯ ಆರೋಗ್ಯ ಅಧಿಕಾರಿ ಹನುಮಂತಪ್ಪ, ಮುಖ್ಯೋಪಾಧ್ಯಾಯ ಸುರೇಶ್ ಗುರಿಕಾರ್, ಸಿಎಸ್‌ಆರ್ ಇಲಾಖೆಯ ಪಿ.ಎಂ. ವಿಜಯಕುಮಾರ, ಎಸ್‌ಡಿಎಂಸಿ ಸದಸ್ಯ ಎರಣ್ಣ, ಪಿಸಿಎಚ್‌ಒ ರೇಣುಕಾ, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವ ಉದ್ದೇಶದಿಂದ ಬಲ್ಡೋಟಾ ಆರೋಗ್ಯ ಮಿತ್ರ ಯೋಜನೆಯಡಿ ಇಂತಹ ಆರೋಗ್ಯ ತಪಾಸಣಾ ಶಿಬಿರಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದ್ದು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಲಾಗುತ್ತಿದೆ ಎಂದು ತಿಳಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News