Ballari | ಗಂಗಾಮತ ಸಮಾಜಕ್ಕೆ ಸಚಿವ ಸ್ಥಾನ ನೀಡದಿದ್ದರೆ ಕಾಂಗ್ರೆಸ್‌ಗೆ ತಕ್ಕ ಉತ್ತರ: ಎಚ್ಚರಿಕೆ

Update: 2026-08-04 20:08 IST

ಬಳ್ಳಾರಿ/ಕಂಪ್ಲಿ, ಆ.5: ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕ್‌ನೂರು ಹಾಗೂ ಶಾಸಕ ಮಂಕಾಳ ವೈದ್ಯ ಅವರಿಗೆ ಸಚಿವ ಸ್ಥಾನ ನೀಡದೆ ಗಂಗಾಮತ ಸಮಾಜವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ ಗಂಗಾಮತ ಸಮಾಜ (ಬೆಸ್ತರು) ತಾಲೂಕು ಘಟಕ, ಕಾಂಗ್ರೆಸ್ ಹೈಕಮಾಂಡ್ ತಕ್ಷಣ ಸಮಾಜಕ್ಕೆ ಸಚಿವ ಸ್ಥಾನ ಅಥವಾ ಉನ್ನತ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದೆ.

ಪಟ್ಟಣದ ತಾಯಮ್ಮ ದೇವಸ್ಥಾನದಲ್ಲಿ ಮಂಗಳವಾರ ನಡೆದ ಸಂಘಟನಾ ಸಭೆಯಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಎಲೆಗಾರ ನಾಗರಾಜ, ಶಾಸಕ ಮಂಕಾಳ ವೈದ್ಯ ಅವರು ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಎರಡನೇ ಹಂತದ ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿ ಅವರ ಹೆಸರಿದ್ದರೂ, ಕೊನೆಯ ಕ್ಷಣದಲ್ಲಿ ಕೈಬಿಡುವ ಮೂಲಕ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಗಂಗಾಮತ, ಮೊಗವೀರ, ಕೋಲಿ ಕಬ್ಬಲಿಗ, ಅಂಬಿಗ ಹಾಗೂ ಬೆಸ್ತ ಸಮುದಾಯ ಸೇರಿದಂತೆ ಸುಮಾರು 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗಂಗಾಮತ ಸಮಾಜ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ಇಂತಹ ಸಮಾಜಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದಿರುವುದು ಸರಿಯಲ್ಲ ಎಂದು ಹೇಳಿದರು.

ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕ್‌ನೂರು ಅವರಿಗೂ ಸಚಿವ ಸ್ಥಾನ ನೀಡಬೇಕಾಗಿತ್ತು. ಆದರೆ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡದೆ ಕಾಂಗ್ರೆಸ್ ಹೈಕಮಾಂಡ್ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ಈಗಲಾದರೂ ಗಂಗಾಮತ ಸಮಾಜದ ನಾಯಕರಿಗೆ ಸಚಿವ ಸ್ಥಾನ ಅಥವಾ ಉನ್ನತ ಹುದ್ದೆ ನೀಡಬೇಕು. ಇಲ್ಲವಾದಲ್ಲಿ ಹೋರಾಟದ ಮೂಲಕ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಕರೇಕಲ್ ಮನೋಹರ, ಅಯೋಧ್ಯ ವೆಂಕಟೇಶ, ಬಿ. ಸಿದ್ದಪ್ಪ, ಅಯೋಧ್ಯ ವಾಸು, ಆನೆಗುಂದಿ ತಾಯಣ್ಣ, ಕೆ.ಬಿ. ವೀರಭದ್ರಪ್ಪ, ಅಯೋಧ್ಯ ರಮೇಶ್, ಜೋಳಮಾರೋ ಈರಪ್ಪ, ಲಬೇದ್ ವೀರೇಶ್, ಕೋಟೆ ಮ್ಯಾಗಾಳ್ ನಾಗರಾಜ, ಉಡೆಗೋಳ್ ಶರಣಪ್ಪ, ಇಟಗಿ ಈರಣ್ಣ, ಉಡೆಗೋಳ್ ದ್ಯಾವಣ್ಣ, ಅಂಬಿಗರ ಯಲ್ಲಪ್ಪ, ಕೆ. ಪ್ರಕಾಶ, ಜೋಳಮಾರೋ ವೀರಭದ್ರಪ್ಪ ಹಾಗೂ ನಾಗೇಶ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News