Ballari | ಸಂಡೂರಿನ ಎಸ್‌ಆರ್‌ಎಸ್‌ ಶಾಲೆಯಲ್ಲಿ ಅದ್ದೂರಿ ಸ್ವಾತಂತ್ರ್ಯೋತ್ಸವ

Update: 2026-08-15 18:29 IST

ಸಂಡೂರು/ಬಳ್ಳಾರಿ: ಪಟ್ಟಣದ ಎಸ್‌ಆರ್‌ಎಸ್‌ ಶಾಲೆಯ ಮೈದಾನದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಭಕ್ತಿ ಹಾಗೂ ಸಂಭ್ರಮದ ವಾತಾವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀಮತಿ ಸೂರ್ಯಪ್ರಭಾ ಅಜಯ್ ಘೋರ್ಪಡೆ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಹಾಗೂ ಪೈಪ್‌ಬ್ಯಾಂಡ್‌ ಪ್ರದರ್ಶನ ಗಮನ ಸೆಳೆಯಿತು.

ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ನೃತ್ಯಗಳು, ದೇಶಭಕ್ತಿ ಗೀತೆಗಳು ಹಾಗೂ ಭಾಷಣಗಳು ಸ್ವಾತಂತ್ರ್ಯದ ಮಹತ್ವ ಮತ್ತು ದೇಶಾಭಿಮಾನವನ್ನು ಬಿಂಬಿಸಿದವು. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಗಣ್ಯರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರಾಟೆ ಮಾಸ್ಟರ್ ಮಹಮ್ಮದ್ ನಬಿ ಸಾಬ್ ಅವರ ನೇತೃತ್ವದಲ್ಲಿ ತುಮಕೂರು ಜಿಲ್ಲೆಯ ಶಿರಾದಲ್ಲಿ ನಡೆದ ಐಸಿಎಸ್‌ಸಿ ಪ್ರಾದೇಶಿಕ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಕುಮಾರ್ ಬಿ. ವಿಷ್ಣು, ಕುಮಾರಿ ಉಮಲ್‌ ಹುದಾ, ಆರಾಧ್ಯ ಕೋರಿ ಹಾಗೂ ಶಿವರಾಜ್ ಅವರಿಗೆ ಮುಖ್ಯ ಅತಿಥಿ ಸೂರ್ಯಪ್ರಭಾ ಘೋರ್ಪಡೆ ಅವರು ಪ್ರಶಸ್ತಿ ವಿತರಿಸಿ ಅಭಿನಂದಿಸಿದರು.

ಶಾಲೆಯ ನಾಯಕಿ ಕುಮಾರಿ ಆಲಿಯಾ ಫಿರ್ದೋಸ್ ಸ್ವಾಗತ ಭಾಷಣ ಮಾಡಿದರು. ಶಾಲೆಯ ನಾಯಕ ಕುಮಾರ್ ಸಂಭ್ರಮ್ ನಡುಮನೆ ವಂದನಾರ್ಪಣೆ ಸಲ್ಲಿಸಿದರು. ಕುಮಾರಿ ಹುಜೇಫ ಹಾಗೂ ಕುಮಾರ್ ಮಹಮ್ಮದ್ ಝೈದ್ ಕಾರ್ಯಕ್ರಮ ನಿರೂಪಿಸಿದರು.

ಶಾಲೆಯ ಕಾರ್ಯದರ್ಶಿ ಶ್ರೀಮತಿ ಆಶಿಯ ಬಾನು, ಪ್ರಾಚಾರ್ಯ ಮುರಳಿ ಕೃಷ್ಣ ಸಮುದ್ರಾಲ, ಆಡಳಿತಾಧಿಕಾರಿ ಸಂಜಾಯ್ ಸೇರಿದಂತೆ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News