Ballari | ಸರಕಾರಿ ಜಾಗ ಒತ್ತುವರಿ ತೆರವು : ಪರ್ಯಾಯ ವಸತಿ ಇಲ್ಲದೆ 15 ಕುಟುಂಬಗಳು ಬೀದಿಗೆ
ಸಿರುಗುಪ್ಪ (ಬಳ್ಳಾರಿ): ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಜಾಗವನ್ನು ಅತಿಕ್ರಮಣದಿಂದ ಮುಕ್ತಗೊಳಿಸುವ ಉದ್ದೇಶದಿಂದ ನಿಟ್ಟೂರು ರಸ್ತೆಯ ಪೊಲೀಸ್ ಠಾಣೆ ಹಿಂಭಾಗದಲ್ಲಿ ಶುಕ್ರವಾರ ತೆರವು ಕಾರ್ಯಾಚರಣೆ ನಡೆಸಲಾಯಿತು.
ಆದರೆ, ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸದೆ ಮನೆಗಳನ್ನು ತೆರವುಗೊಳಿಸಿದ್ದರಿಂದ ನಾಲ್ಕು ಪೌರಕಾರ್ಮಿಕ ಕುಟುಂಬಗಳು ಸೇರಿದಂತೆ ಒಟ್ಟು 15 ಕುಟುಂಬಗಳು ಬೀದಿಗೆ ಬಿದ್ದಿವೆ.
ಪಟ್ಟಣದ ಸರ್ವೇ ನಂ. 486/1ರ ಎರಡು ಎಕರೆ ಸರ್ಕಾರಿ ಜಾಗದಲ್ಲಿ ನಾಲ್ಕು ಪೌರಕಾರ್ಮಿಕ ಕುಟುಂಬಗಳು ಹಾಗೂ 11 ಸಾರ್ವಜನಿಕ ಕುಟುಂಬಗಳು ಹಲವು ವರ್ಷಗಳಿಂದ ವಾಸಿಸುತ್ತಿದ್ದವು. ನೂತನ ಪಟ್ಟಣ ಪಂಚಾಯಿತಿ ಕಟ್ಟಡ ನಿರ್ಮಾಣ ಸೇರಿದಂತೆ ಸಾರ್ವಜನಿಕ ಉದ್ದೇಶಗಳಿಗೆ ಜಾಗವನ್ನು ಬಳಸಿಕೊಳ್ಳುವ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆ ವೇಳೆ ಮನೆಗಳಲ್ಲಿದ್ದ ಬಟ್ಟೆ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಹೊರಗೆ ತರಲಾಯಿತು. ಪರ್ಯಾಯ ವಸತಿ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಕುಟುಂಬಗಳು ತಮ್ಮ ಸಾಮಗ್ರಿಗಳೊಂದಿಗೆ ಬೀದಿಯಲ್ಲೇ ಕುಳಿತುಕೊಳ್ಳುವಂತಾಯಿತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪರಶುರಾಮ್ ನೇತೃತ್ವದಲ್ಲಿ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಸಿರುಗುಪ್ಪ ಸಿಪಿಐ ಹನುಮಂತಪ್ಪ, ತೆಕ್ಕಲಕೋಟೆ ಸಿಪಿಐ ಚಂದನ್ ಗೋಪಾಲ್, ಪಿಎಸ್‌ಐಗಳಾದ ಸದ್ದಾಂ ಹುಸೇನ್, ಪರಶುರಾಮ್, ಶಶಿಧರ್ ನಾಯ್ಕ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದರು.
ಸರ್ಕಾರಿ ಭೂಮಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ಆ.16ರಂದು ಪಟ್ಟಣ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.
ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವು: ಆಕ್ರೋಶ
ಪೌರಕಾರ್ಮಿಕ ಕುಟುಂಬಗಳಿಗೆ ಪರ್ಯಾಯ ವಾಸದ ವ್ಯವಸ್ಥೆ ಕಲ್ಪಿಸದೆ ಮನೆಗಳನ್ನು ತೆರವುಗೊಳಿಸಿರುವುದು ಮಾನವೀಯತೆಯಿಲ್ಲದ ಕ್ರಮ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆರವುಗೊಳಿಸಲಾದ ಕುಟುಂಬಗಳಿಗೆ ತಕ್ಷಣ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.