ಸಂಡೂರು/ಬಳ್ಳಾರಿ: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸಂಡೂರು ಇವರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಪೋಷಣ್ ಮಾಸಾಚರಣೆಯ ಉದ್ಘಾಟನಾ ಕಾರ್ಯಕ್ರಮವನ್ನು ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಯಿತು.

‘ನಮ್ಮ ಅಂಗನವಾಡಿ–ನಮ್ಮ ಜವಾಬ್ದಾರಿ’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ, ಪೌಷ್ಟಿಕ ಆಹಾರ, ಸ್ವಚ್ಛತೆ ಹಾಗೂ ಅಂಗನವಾಡಿ ಕೇಂದ್ರಗಳ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು.

ವಿಶೇಷ ಉಪನ್ಯಾಸ ನೀಡಿದ ಡಾ. ಅಕ್ಷಯ್ ಮಾತನಾಡಿ, ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದರ ಜತೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು. ಮಗುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಅತ್ಯಂತ ಪೌಷ್ಟಿಕಾಂಶಯುಕ್ತ ಮೊದಲ ಆಹಾರವಾಗಿದ್ದು, ಶಿಶುವಿಗೆ ತಾಯಿಯ ಎದೆಹಾಲು ನೀಡುವುದು ಅತ್ಯಂತ ಮುಖ್ಯವಾಗಿದೆ ಎಂದರು.

ಜೋಳ, ಸಜ್ಜೆ, ರಾಗಿ, ಕಡಲೆ, ಸೋಯಾಬೀನ್ ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ದಿನನಿತ್ಯದ ಆಹಾರದಲ್ಲಿ ಬಳಸುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪಡೆಯಬಹುದು ಎಂದು ಹೇಳಿದರು. ಗರ್ಭಿಣಿಯರಿಗೆ ಪೌಷ್ಟಿಕ ಆಹಾರ, ಆರೋಗ್ಯ ಕಾಳಜಿ ಹಾಗೂ ಗರ್ಭಾವಸ್ಥೆಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಂಗವಾಗಿ ‘ತಾಯಿಯ ಹೆಸರಲ್ಲಿ ಒಂದು ಗಿಡ’ ಎಂಬ ಪರಿಸರ ಜಾಗೃತಿ ಅಭಿಯಾನದಡಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ತಾಯಿ ಮತ್ತು ಮಗುವಿನ ಆರೋಗ್ಯದ ಜತೆಗೆ ಪರಿಸರ ಸಂರಕ್ಷಣೆಯ ಮಹತ್ವ ಸಾರಿದ ಕಾರ್ಯಕ್ರಮ ಗಮನ ಸೆಳೆಯಿತು.

ಕಾರ್ಯಕ್ರಮವನ್ನು ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಮೊಹಮ್ಮದ್ ಶಾಯಿಜ್‌ಚೌತಾಯ್ ಉದ್ಘಾಟಿಸಿದರು. ತಹಶೀಲ್ದಾರ್ ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರಾಜ್ ಪಿ., ವಕೀಲರ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಎಸ್., ಉಪಾಧ್ಯಕ್ಷೆ ಈ.ಕೆ. ರೇಖಾ, ಕಾರ್ಯದರ್ಶಿ ರಾಮಮೂರ್ತಿ ಎಸ್., ಪುರಸಭೆ ಮುಖ್ಯಾಧಿಕಾರಿ ವಿನಯ್‌ಕುಮಾರದಗೌಡ, ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಮಂಜುನಾಥ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ಯಾನಲ್ ವಕೀಲ ಡಿ. ನಾಗರಾಜ್ ಸ್ವಾಗತಿಸಿದರು. ಛಾಯಾ ಹಾಗೂ ತಂಡದವರು ಪ್ರಾರ್ಥನೆ ಸಲ್ಲಿಸಿದರು. ಸಮನ್ವಯ ಅಧಿಕಾರಿ ಜಗನ್ನಾಥ್ ನಿರೂಪಿಸಿದರು. ಪ್ಯಾನಲ್ ವಕೀಲ ಉಮ್ಮತ್ ಪಾರೂಖ್ ವಂದನಾರ್ಪಣೆ ಸಲ್ಲಿಸಿದರು.

ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಗರ್ಭಿಣಿಯರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor