Ballari | ಜನತಾ ಬಜಾರ್ ಅಧ್ಯಕ್ಷರಾಗಿ ವೆಂಕಟೇಶ್ ಹೆಗಡೆ ಅವಿರೋಧ ಆಯ್ಕೆ
ಬಳ್ಳಾರಿ: ನಗರದ ಜನತಾ ಬಜಾರ್‌ನ ನೂತನ ಅಧ್ಯಕ್ಷರಾಗಿ ವೆಂಕಟೇಶ್ ಹೆಗಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವೆಂಕಟಸ್ವಾಮಿ ಅವರು ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ಹೆಗಡೆ ಅವರ ಹೆಸರಿಗೆ ಆಡಳಿತ ಮಂಡಳಿಯಲ್ಲಿ ಒಮ್ಮತ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ಆಯ್ಕೆ ಅವಿರೋಧವಾಗಿ ನಡೆಯಿತು. ಆದರೆ, ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟಸ್ವಾಮಿ ಹಾಗೂ ಕಾತ್ಯಾಯಿನಿ ಮರಿದೇವಯ್ಯ ಅವರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಮತದಾನದಲ್ಲಿ ವೆಂಕಟಸ್ವಾಮಿ 9 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಕಾತ್ಯಾಯಿನಿ ಮರಿದೇವಯ್ಯ 8 ಮತಗಳನ್ನು ಪಡೆದು ಪರಾಭವಗೊಂಡರು.
ಬಳಿಕ ಮಾತನಾಡಿದ ನೂತನ ಅಧ್ಯಕ್ಷ ವೆಂಕಟೇಶ್ ಹೆಗಡೆ, ಆಡಳಿತ ಮಂಡಳಿಯ ಎಲ್ಲ ಸದಸ್ಯರ ವಿಶ್ವಾಸ ಹಾಗೂ ಸಹಕಾರದೊಂದಿಗೆ ಜನತಾ ಬಜಾರ್‌ನ ಅಭಿವೃದ್ಧಿಗೆ ಶ್ರಮಿಸಲಾಗುವುದು. ಸಂಸ್ಥೆಯ ಹಿತಾಸಕ್ತಿ ಕಾಪಾಡುವುದರ ಜತೆಗೆ ಪಾರದರ್ಶಕ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನೂತನ ಪದಾಧಿಕಾರಿಗಳಿಗೆ ಆಡಳಿತ ಮಂಡಳಿ ಸದಸ್ಯರು ಹಾಗೂ ಗಣ್ಯರು ಅಭಿನಂದನೆ ಸಲ್ಲಿಸಿದರು.