ಸಂಡೂರು: ತಾಲ್ಲೂಕಿನ ದೋಣಿಮಲೈ ಕ್ರಾಸ್ ಸಮೀಪದ ಕೃಷ್ಣಾನಗರ ಗ್ರಾಮದಲ್ಲಿ ಹಜರತ್ ಸೈಯದ್ ಷಾ ಬಾಬಾ ಫಕ್ರುದ್ದೀನ್ (ರ.ಅ.) ಅವರ 754ನೇ ಉರೂಸ್ ಮಹೋತ್ಸವವು ಸರ್ವಧರ್ಮೀಯರ ಒಗ್ಗೂಡುವಿಕೆಯೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಬಾಬಾ ಫಕ್ರುದ್ದೀನ್ ಕಮಿಟಿ, ಕೃಷ್ಣಾನಗರ ಜಾಮಿಯಾ ಮಸೀದಿ ಕಮಿಟಿ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಶನಿವಾರ ಸಂದಲ್ ಮೆರವಣಿಗೆ ಹಾಗೂ ಭಾನುವಾರ ರಾತ್ರಿ ಕವ್ವಾಲಿ ಕಾರ್ಯಕ್ರಮ ಜರುಗಿದವು. ಸಂಸದ ಈ. ತುಕಾರಾಂ ಹಾಗೂ ಶಾಸಕಿ ಅನ್ನಪೂರ್ಣ ಈ. ತುಕಾರಾಂ ಅವರು ದರ್ಗಾಕ್ಕೆ ಭೇಟಿ ನೀಡಿ, ಚಾದರ ಸಮರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ಅನ್ನಪೂರ್ಣ, ಎಲ್ಲ ಧರ್ಮಗಳ ಜನರು ಒಗ್ಗೂಡಿ ಉರೂಸ್ ಆಚರಿಸುತ್ತಿರುವುದು ಧಾರ್ಮಿಕ ಸಾಮರಸ್ಯ ಹಾಗೂ ಸಹಬಾಳ್ವೆಗೆ ಸಾಕ್ಷಿಯಾಗಿದೆ. ಸಂತರ ಆಶೀರ್ವಾದದಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆ-ಬೆಳೆಯಾಗಿ, ರೈತರು ಹಾಗೂ ಜನತೆ ಸುಖ-ಸಮೃದ್ಧಿಯಿಂದ ಬಾಳುವಂತಾಗಲಿ ಎಂದು ಆಶಿಸಿದರು.

ಸಂಚಾರ ದಟ್ಟಣೆ, ಸಾರ್ವಜನಿಕರ ಅಸಮಾಧಾನ :

ಉರೂಸ್‌ಗೆ ಮೂರು ದಿನಗಳ ಕಾಲ ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರು ಆಗಮಿಸಿದ್ದರಿಂದ ದೋಣಿಮಲೈ ಕ್ರಾಸ್ ಮತ್ತು ಕೃಷ್ಣಾನಗರ ಸುತ್ತಮುತ್ತ ತೀವ್ರ ಸಂಚಾರ ದಟ್ಟಣೆ ಉಂಟಾಯಿತು. ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹಾಗೂ ವ್ಯವಸ್ಥಿತ ಪಾರ್ಕಿಂಗ್ ಕಲ್ಪಿಸಲು ಪೊಲೀಸ್, ಗ್ರಾಮ ಮತ್ತು ತಾಲ್ಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳದಿರುವುದಕ್ಕೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು. ದೊಡ್ಡ ಮಟ್ಟದ ಧಾರ್ಮಿಕ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಹಾಗೂ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಿತ್ತು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪೀರಾಸಾಬ್/ವಾರ್ತಾಭಾರತಿ

contributor

ಬೂದುಗುಪ್ಪ ಪೀರಾಸಾಬ್ ಅವರು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ವೆಬ್ ಪತ್ರಿಕೋದ್ಯಮದ ಜೊತೆಗೆ ಸಾಮಾಜಿಕ ಹಾಗೂ ರಾಜಕೀಯ ವಿಷಯಗಳ ವರದಿಗಾರಿಕೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಪ್ರಸ್ತುತ ವಾರ್ತಾಭಾರತಿಯಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ