ಬಳ್ಳಾರಿ: ಭಾರತೀಯ ಕಲಾ ಪ್ರಪಂಚದ ವೈಶಿಷ್ಟ್ಯಪೂರ್ಣ ಜಾನಪದ ಕಲಾಪ್ರಕಾರವಾದ ತೊಗಲು ಗೊಂಬೆಯಾಟವನ್ನು ದಶಕಗಳಿಂದ ಜೀವಂತವಾಗಿರಿಸಿರುವ ಬಳ್ಳಾರಿ ಜಿಲ್ಲೆಯ ಖ್ಯಾತ ಕಲಾವಿದೆ ಹುಲಿಗೆಮ್ಮ ಅವರಿಗೆ ಕರ್ನಾಟಕ ಸರ್ಕಾರವು ಬಯಲಾಟ ಕ್ಷೇತ್ರದಲ್ಲಿ ಈ ಬಾರಿಯ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದೆ.

ದಿ. ಹುಲೆಪ್ಪ ಹಾಗೂ ದಿ. ಪಾರ್ವತಮ್ಮ ದಂಪತಿಯ ಪುತ್ರಿಯಾದ ಹುಲಿಗೆಮ್ಮ ಅವರು ಔಪಚಾರಿಕ ಶಿಕ್ಷಣ ಪಡೆದಿಲ್ಲದಿದ್ದರೂ, ತಂದೆಯಿಂದ ಬಳುವಳಿಯಾಗಿ ಬಂದ ತೊಗಲುಗೊಂಬೆಯಾಟ ಕಲೆಯನ್ನು ತಮ್ಮ 10ನೇ ವಯಸ್ಸಿನಲ್ಲಿಯೇ ಕರಗತ ಮಾಡಿಕೊಂಡರು. ಅಂದಿನಿಂದ ಇಂದಿನವರೆಗೂ ಬಳ್ಳಾರಿ ಜಿಲ್ಲೆ ಸೇರಿದಂತೆ ಸಮಸ್ತ ಕನ್ನಡ ನಾಡಿನ ಸಾಂಸ್ಕೃತಿಕ ವೇದಿಕೆಗಳಲ್ಲಿ ನಿರಂತರವಾಗಿ ಕಲಾಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಕೇವಲ ಸಾಂಪ್ರದಾಯಿಕ ರಾಮಾಯಣ, ಮಹಾಭಾರತದ ಕಥಾ ಪ್ರಸಂಗಗಳಿಗಷ್ಟೇ ಸೀಮಿತವಾಗದೆ, ತಮ್ಮ ಗೊಂಬೆಯಾಟದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಾ ಬಂದಿದ್ದಾರೆ. ಪ್ರಮುಖವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಸ್ವಚ್ಛ ಭಾರತ ಅಭಿಯಾನ ಹಾಗೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ‘ಮರಳಿ ಬಾ ಶಾಲೆಗೆ’ ಎಂಬ ವಿಷಯಗಳ ಕುರಿತು ಜಿಲ್ಲೆಯಾದ್ಯಂತ ಜಾಗೃತಿ ಪ್ರದರ್ಶನಗಳನ್ನು ನೀಡಿ ಗಮನ ಸೆಳೆದಿದ್ದಾರೆ.

ಮೈಸೂರು ದಸರಾ, ಹಂಪಿ ಉತ್ಸವ, ಲಕ್ಕುಂಡಿ ಉತ್ಸವ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಪ್ರಮುಖ ವೇದಿಕೆಗಳಲ್ಲಿ ತಮ್ಮ ತಂಡದೊಂದಿಗೆ ಪ್ರದರ್ಶನ ನೀಡಿದ್ದಾರೆ.

ಪ್ರಸ್ತುತ ಬಳ್ಳಾರಿಯ ‘ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡ’ದ ಸಕ್ರಿಯ ಸದಸ್ಯೆಯಾಗಿರುವ ಹುಲಿಗೆಮ್ಮ ಅವರು, ಹೊಸ ಪೀಳಿಗೆಯ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಈ ಕಲೆಯಲ್ಲಿ ತರಬೇತಿ ನೀಡುವ ಮೂಲಕ ತೊಗಲುಗೊಂಬೆಯಾಟದ ಉಳಿವು ಮತ್ತು ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಅವರ ಸುದೀರ್ಘ ಕಲಾಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಈ ಗೌರವವನ್ನು ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor