ಬಳ್ಳಾರಿ| ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶ
ಬಳ್ಳಾರಿ: ಜಿಲ್ಲೆಯಲ್ಲಿ 6 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ, ಸರ್ಕಾರೇತರ ಹಾಗೂ ಅನುದಾನಿತ ವಸತಿ ನಿಲಯಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಸೂಚನೆ ನೀಡಿದ್ದಾರೆ.
'6 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ವಿವಿಧ ಇಲಾಖೆಗಳಡಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳ ಕಾರ್ಯವಿಧಾನಗಳ ಮಾರ್ಗಸೂಚಿಗಳು-2025' ಅನ್ನು ಜಾರಿಗೆ ತರಲು ಸರ್ಕಾರ ಆದೇಶಿಸಿದೆ. ಈ ಪ್ರಕಟಣೆ ಹೊರಡಿಸಿದ ದಿನದಿಂದ 2 ತಿಂಗಳೊಳಗೆ ಎಲ್ಲಾ ವಸತಿ ನಿಲಯಗಳು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರಿ ವಸತಿ ನಿಲಯಗಳು ಆಯಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸಬೇಕು. ಸರ್ಕಾರೇತರ ಮತ್ತು ಅನುದಾನಿತ ವಸತಿ ನಿಲಯಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಅರ್ಜಿ ಸಲ್ಲಿಸಬೇಕು. ಮಾರ್ಗಸೂಚಿ-2025ರಲ್ಲಿ ನೀಡಲಾಗಿರುವ 'ನಮೂನೆ-1' ರಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಅಥವಾ ನಗರದ ಕಂಟೋನ್‌ಮೆಂಟ್ ನ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.