×
Ad

ಕಂಪ್ಲಿ | ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ

Update: 2026-05-23 19:55 IST

ಕಂಪ್ಲಿ : ಎಐಡಿಎಸ್ಓ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.

ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚಬಾರದು ಎಂದು ಆಗ್ರಹಿಸಿ, ಶಾಲೆ ಮುಂದೆ “ನಮ್ಮೂರ ಶಾಲೆ ನಮ್ಮಯ ಕಣ್ಮಣಿ” ಎಂಬ ಬ್ಯಾನರ್ ಅಳವಡಿಸಿ ಗ್ರಾಮಸ್ಥರು ಹೋರಾಟ ನಡೆಸಿದರು.

ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿ, ರಾಜ್ಯಾದ್ಯಂತ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ ಸರ್ಕಾರ ಯೋಜನೆ ಜಾರಿಗೆ ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.

ಈ ಯೋಜನೆಯಿಂದ ಬಡವರು ಓದುತ್ತಿರುವ ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟು, ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಧಕ್ಕೆಯಾಗಲಿದೆ. ರೈತರು, ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಮಕ್ಕಳು 4-5 ಕಿ.ಮೀ ದೂರದ ಶಾಲೆಗಳಿಗೆ ಹೋಗುವುದು ಕಷ್ಟಕರವಾಗಿದೆ. ಅನೇಕ ಗ್ರಾಮಗಳಲ್ಲಿ ಸರಿಯಾದ ರಸ್ತೆ ಮತ್ತು ಬಸ್ ಸೌಲಭ್ಯಗಳೇ ಇಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಮಹಾತ್ಮಾಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರು ಶೋಷಿತರು ಹಾಗೂ ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಟ ನಡೆಸಿದಂತೆ, ಇಂದು ಸರ್ಕಾರಿ ಶಾಲೆ ಉಳಿಸಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಎಐಕೆಕೆಎಂಎಸ್ ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷ ಗೋವಿಂದ, ಗ್ರಾಮಸ್ಥರಾದ ತಿಪ್ಪೇಸ್ವಾಮಿ, ಕರಿಯಪ್ಪ, ಮಲ್ಲಿ, ಸಿದ್ದು ಹಾಗೂ ಪೋಷಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News