Kampli | ಸರ್ಕಾರಿ ಕಾಮಗಾರಿಗಳಿಗೆ ಮರಳು ಗಣಿಗಾರಿಕೆಗೆ ಅನುಮತಿ : ಎಚ್.ಡಿ.ರಾಜೇಶ್
ಕಂಪ್ಲಿ : ತಾಲೂಕಿನ ಸರ್ಕಾರಿ ಕಾಮಗಾರಿಗಳಿಗೆ ಮರಳಿನ ಕೊರತೆ ಉಂಟಾಗಿರುವ ಹಿನ್ನೆಲೆ ಲೋಕೋಪಯೋಗಿ ಇಲಾಖೆಗೆ ಮರಳು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದು ಬಳ್ಳಾರಿ ಉಪವಿಭಾಗದ ಸಹಾಯಕ ಆಯುಕ್ತ ಎಚ್.ಡಿ. ರಾಜೇಶ್ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಅಧಿಕೃತ ಮರಳು ಬ್ಲಾಕ್ ಇಲ್ಲದ ಕಾರಣ ಸರ್ಕಾರಿ ಕಾಮಗಾರಿಗಳು ಹಾಗೂ ಸಾರ್ವಜನಿಕರ ಕಟ್ಟಡ ನಿರ್ಮಾಣ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ತೀರದಲ್ಲಿರುವ ಮರಳು ಲಭ್ಯ ಪ್ರದೇಶವನ್ನು ಕಂದಾಯ ಇಲಾಖೆ ಗುರುತಿಸಿದ್ದು, ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಿಹಳ್ಳಿ ತಾಂಡ ಸಮೀಪ ಮರಳು ಗಣಿಗಾರಿಕೆಗೆ ಲೋಕೋಪಯೋಗಿ ಇಲಾಖೆಗೆ ಪರವಾನಗಿ ನೀಡಲಾಗಿದೆ ಎಂದು ಹೇಳಿದರು.
ಸರ್ಕಾರದ ಮಾರ್ಗಸೂಚಿಯಂತೆ ಲೋಕೋಪಯೋಗಿ ಇಲಾಖೆ ಮರಳು ಗಣಿಗಾರಿಕೆ ನಡೆಸಿ ಸರ್ಕಾರಿ ಕಾಮಗಾರಿಗಳಿಗೆ ಮರಳು ಪೂರೈಸಲಿದೆ. ಜೊತೆಗೆ ಖಾಸಗಿಯವರಿಗೂ ನಿಯಮಾನುಸಾರ ಮರಳು ವಿತರಿಸಲಾಗುವುದು ಎಂದು ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು. ಬೀದಿ ದೀಪಗಳ ನಿರ್ವಹಣೆ, ಕುರುಗೋಡು ರಸ್ತೆಯ ದ್ವಿಪಥ ರಸ್ತೆಯ ಜೋಡಿ ಬೀದಿ ದೀಪಗಳ ದುರಸ್ತಿ ಹಾಗೂ ನೀರು ಸರಬರಾಜಿನ ರೈಸಿಂಗ್ ಪೈಪ್‌ಲೈನ್ ದುರಸ್ತಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಐತಿಹಾಸಿಕ ಸೋಮಪ್ಪನ ಕೆರೆ ದಂಡೆಯ ಮುಖ್ಯರಸ್ತೆ ಹಾಗೂ ಪಟ್ಟಣದ ಪಾದಚಾರಿ ಮಾರ್ಗಗಳಲ್ಲಿ ನಡೆದಿರುವ ಅತಿಕ್ರಮಣ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಸಣಾಪುರ ರಸ್ತೆಯ ಎರಡೂ ಬದಿಗಳ ಅತಿಕ್ರಮಣವನ್ನು ಶೀಘ್ರ ತೆರವುಗೊಳಿಸದಿದ್ದರೆ ಸ್ವತಃ ತಾವೇ ಬಂದು ಕಾರ್ಯಾಚರಣೆ ನಡೆಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳಿಗೆ ಅಡಚಣೆ ಉಂಟಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಜೂಗಲ್ ಮಂಜುನಾಯಕ, ಕಂದಾಯ ಹಾಗೂ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.