Kampli | ನಾಡು, ನುಡಿ, ನೆಲ-ಜಲದ ರಕ್ಷಣೆಗೆ ಕನ್ನಡಿಗರು ಒಗ್ಗಟ್ಟಿನಿಂದ ಹೋರಾಡಲಿ: ಬಿ.ಸಿದ್ದಪ್ಪ
ಕಂಪ್ಲಿ: ಕನ್ನಡ ನಾಡು, ನುಡಿ ಹಾಗೂ ನೆಲ-ಜಲಕ್ಕೆ ಯಾವುದೇ ಧಕ್ಕೆ ಎದುರಾದಾಗ ಕನ್ನಡಿಗರು ಒಗ್ಗಟ್ಟಾಗಿ ದಿಟ್ಟತನದಿಂದ ಹೋರಾಡಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ ಕರೆ ನೀಡಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದ ಮುಂಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡವು ನಮ್ಮ ಬದುಕು ಮತ್ತು ಸ್ವಾಭಿಮಾನದ ಪ್ರತೀಕವಾಗಿದೆ. ರಾಜ್ಯದಲ್ಲಿ ನೆಲೆಸಿರುವ ಕನ್ನಡೇತರರು ಇಲ್ಲಿನ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಗೌರವಿಸಬೇಕು. ಅಲ್ಲದೆ, ತಮ್ಮ ದೈನಂದಿನ ಬದುಕಿನಲ್ಲಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಕನ್ನಡದ ಬೆಳವಣಿಗೆಗೆ ಸಹಕರಿಸಬೇಕು ಎಂದು ಹೇಳಿದರು.
ಕರವೇ ರಾಜ್ಯ ಸಂಚಾಲಕ ಅದ್ದಿಗೇರಿ ರಾಮಣ್ಣ ಮಾತನಾಡಿ, ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಸಂದರ್ಭದಲ್ಲಿ ಹಲವು ಕನ್ನಡ ಭಾಷಿಕ ಪ್ರದೇಶಗಳು ನೆರೆಯ ರಾಜ್ಯಗಳ ಪಾಲಾಗಿವೆ. ಗಡಿನಾಡ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನೂತನ ಪದಾಧಿಕಾರಿಗಳ ನೇಮಕ: ಸಂಘಟನೆಯ ನೂತನ ಪದಾಧಿಕಾರಿಗಳನ್ನಾಗಿ ಬಿ. ರಮೇಶ ಅವರನ್ನು ಜಿಲ್ಲಾ ಉಪಾಧ್ಯಕ್ಷರಾಗಿ, ಇಸ್ಮಾಯಿಲ್‌ಬೇಗ್ ಅವರನ್ನು ತಾಲೂಕು ಅಧ್ಯಕ್ಷರಾಗಿ ಹಾಗೂ ಸಿ.ಎಂ. ಬಸವರಾಜ ಅವರನ್ನು ನಗರ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ, ಮುಖಂಡರಾದ ಎಂ. ಉಸ್ಮಾನ, ವಿ. ವೆಂಕಟರಮಣ, ವಿ. ರಘುನಾಯಕ, ಕೆ. ರಂಗಪ್ಪ, ಪ್ರಸನ್ನ, ಇಟಗಿ ಬಾಲೇಸಾಬ್, ಮಡಿವಾಳ ಹುಲುಗಪ್ಪ, ಎಂ. ಗೋಪಾಲ, ಮೌಲಾಸಾಬ್ ಚಿತ್ರಗಾರ, ವೆಂಕಟೇಶ, ಪರುಶುರಾಮ್, ಶರಣ್ಣಪ್ಪ, ಗೌರಿಶಂಕರ ಸೇರಿದಂತೆ ಹಲವು ಕಾರ್ಯಕರ್ತರು ಹಾಗೂ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.