ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ : ಪ್ರಸಾದ್ ಗಡಾದ್
ಬಳ್ಳಾರಿ / ಕಂಪ್ಲಿ : ಜೆಸಿಐ ಸಂಸ್ಥೆಯು ಮರಗಿಡಗಳಲ್ಲಿ ಮಡಿಕೆಗಳನ್ನು ಕಟ್ಟಿ ಪಕ್ಷಿಗಳಿಗೆ ನೀರುಣಿಸುವ ಕಾಯಕದಲ್ಲಿ ತೊಡಗಿರುವುದು ಅತ್ಯಂತ ಮಾದರಿಯಾಗಿದೆ. ಇಂತಹ ಕಾರ್ಯಗಳ ಮೂಲಕ ಪಕ್ಷಿ ಸಂಕುಲವನ್ನು ಸಂರಕ್ಷಿಸಿದರೆ ಮಾತ್ರ ಪರಿಸರ ಉಳಿಯಲು ಮತ್ತು ಸಮೃದ್ಧಗೊಳ್ಳಲು ಸಾಧ್ಯ ಎಂದು ಜೆಎಸಿ ವಲಯ ಉಪಾಧ್ಯಕ್ಷ ಪ್ರಸಾದ್ ಗಡಾದ್ ತಿಳಿಸಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯ ಉದ್ಯಾನವನದಲ್ಲಿ ಗುರುವಾರ ಜ್ಯೂನಿಯರ್ ಚೇಂಬರ್ ಇಂಟರನ್ಯಾಷನಲ್ ಅಲುಮ್ನಿ ಕ್ಲಬ್ (ಜೆಎಸಿ) ಆಯೋಜಿಸಿದ್ದ ‘ಪಕ್ಷಿಗಳಿಗೆ ನೀರು ಕಲ್ಪಿಸುವ ಮಡಿಕೆ ಅಳವಡಿಸುವ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬೇಸಿಗೆ ಮುಗಿಯುವ ತನಕ ಮಡಿಕೆಗಳಲ್ಲಿ ನೀರಿನ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಲು ಅವರು ಸಲಹೆ ನೀಡಿದರು.
ಜೆಸಿಐ ಕಂಪ್ಲಿ ಸೋನಾ ಘಟಕ ಅಧ್ಯಕ್ಷ ಡಾ. ಭರತ್ ಪದ್ಮಶಾಲಿ ಮಾತನಾಡಿ, “ಒಂದು ಪಾತ್ರೆ ನೀರು – ನೂರಾರು ಪಕ್ಷಿಗಳಿಗೆ ನೆರವು” ಎಂಬ ಘೋಷಣೆಯೊಂದಿಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮುಂದಿನ 10 ದಿನಗಳ ಕಾಲ ಈ ಅಭಿಯಾನ ನಡೆಯಲಿದ್ದು, ಸಾರ್ವಜನಿಕರು ತಮ್ಮ ಮನೆಯ ಛಾವಣಿ ಅಥವಾ ಸುತ್ತಮುತ್ತಲಿನ ಮರಗಳಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ವಿದ್ಯಾಲಯದ ಸಕಲೇಶ್ವರಿ ಅಕ್ಕಾ, ಹಿರಿಯರಾದ ಅರವಿ ಬಸವನಗೌಡ್ರು, ಜೆಸಿಐ ವಲಯ ಅಧಿಕಾರಿ ಜೆಸಿ ಬಿ. ರಸೂಲ್, ಹಿರಿಯ ಜೆಸಿ ಹಾಗೂ ತಾಲೂಕು ವೀರಶೈವ ಸಂಘದ ಅಧ್ಯಕ್ಷ ಎಸ್. ಎಂ. ನಾಗರಾಜ, ಪೂರ್ವ ಅಧ್ಯಕ್ಷರುಗಳಾದ ವಾಸಿಮ್ ಪಯಾಜ್, ಬಿ. ಜಿಲಾನಸಾಬ್, ಡಿ. ಮಂಜೇಶ, ಸೋಗಿ ಸಂತೋಷ, ಸದ್ಯಸರುಗಳಾದ ಅಕ್ಕಿ ಜಿಲಾನ್, ಗುರುಶಾಂತ ಮೂರ್ತಿ, ಬೆಳಗಿನ ಜಾವದ ನಡಿಗೆಯ ತಂಡದ ಸದ್ಯಸರು, ಪುರಸಭೆ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.