Siruguppa | ತೆಕ್ಕಲಕೋಟೆಯಲ್ಲಿ ದಿಢೀರ್ ದಾಳಿ: ಮೂವರು ಬಾಲಕಾರ್ಮಿಕರ ರಕ್ಷಣೆ
ಸಿರುಗುಪ್ಪ: ಬಾಲಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕುವ ಉದ್ದೇಶದಿಂದ ತಾಲ್ಲೂಕು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಟಾಸ್ಕ್ ಫೋರ್ಸ್ ಸಮಿತಿಯು ಸೋಮವಾರ ವಿವಿಧ ಉದ್ದಿಮೆಗಳ ಮೇಲೆ ದಿಢೀರ್ ದಾಳಿ ನಡೆಸಿ, ಕೆಲಸದಲ್ಲಿ ತೊಡಗಿದ್ದ ಮೂವರು ಬಾಲಕಾರ್ಮಿಕರನ್ನು ರಕ್ಷಿಸಿದೆ.
ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆ ಬದಿಯಲ್ಲಿರುವ ಗ್ಯಾರೇಜ್‌ಗಳು, ಮೆಕ್ಯಾನಿಕ್ ಅಂಗಡಿಗಳು, ಕಟ್ಟಡ ನಿರ್ಮಾಣ ಸ್ಥಳಗಳು ಮತ್ತು ಬೇಕರಿಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದರು.
ಈ ವೇಳೆ ಕೆಲಸದಲ್ಲಿ ತೊಡಗಿದ್ದ ಬಾಲಕಾರ್ಮಿಕರನ್ನು ಪತ್ತೆಹಚ್ಚಿ, ಸ್ಥಳದಲ್ಲೇ ಅವರ ಹೇಳಿಕೆ ದಾಖಲಿಸಿಕೊಂಡು ಮುಂದಿನ ಪುನರ್ವಸತಿ ಕ್ರಮಕ್ಕಾಗಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಯಿತು.
ಕಾರ್ಯಾಚರಣೆಗೆ ಮುನ್ನ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಯಿತು. ಬಾಲಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸುವುದು ಕಾನೂನುಬಾಹಿರವಾಗಿದ್ದು, ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಕುರಿತು ಉದ್ದಿಮೆ ಮಾಲಕರಿಗೆ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಕರಪತ್ರಗಳು ಹಾಗೂ ಪೋಸ್ಟರ್‌ಗಳನ್ನು ವಿತರಿಸಿ ಎಚ್ಚರಿಕೆ ನೀಡಲಾಯಿತು.
ಕಾರ್ಯಾಚರಣೆಯಲ್ಲಿ ಉಪತಹಶೀಲ್ದಾರ್ ಯಾಕೂಬ್ ಅಲಿ, ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಡ್ಡೇರು ಸಿದ್ದಯ್ಯ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್, ಕಂದಾಯ ನಿರೀಕ್ಷಣಾಧಿಕಾರಿ ಗಣೇಶ್, ಗ್ರಾಮ ಅಭಿವೃದ್ಧಿ ಅಧಿಕಾರಿ ಶಿವರಾಜ್ ಎಸ್., ಪಿಎಸ್‌ಐ ನಾರಾಯಣಸ್ವಾಮಿ, ಮಕ್ಕಳ ಸಹಾಯವಾಣಿ ಸಿಬ್ಬಂದಿ, ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಣಾಧಿಕಾರಿ ಅನ್ನಪೂರ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.