ಸರಕಾರಿ ಶಾಲೆಗಳಲ್ಲಿ 1,582 ಶೌಚಾಲಯಗಳನ್ನು ನಿರ್ಮಿಸಲು ಅನುಮೋದನೆ : ಸಚಿವ ಮಧು ಬಂಗಾರಪ್ಪ
ಮಧು ಬಂಗಾರಪ್ಪ
ಬೆಂಗಳೂರು : ರಾಜ್ಯವಲಯ ಯೋಜನೆಯಡಿ 2025-26ನೇ ಸಾಲಿನಲ್ಲಿ ರಾಜ್ಯದ 1,250 ಸರಕಾರಿ ಶಾಲೆಗಳಲ್ಲಿ 1,582 ಶೌಚಾಲಯಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಯು.ಬಿ.ಬಣಕಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 136 ಶೌಚಾಲಯಗಳು ಮಂಜೂರಾಗಿವೆ. ಮೊದಲ ಹಂತದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಆದ್ಯತೆ ನೀಡಿದ್ದು, ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ 504.23ಲಕ್ಷ ರೂ. ಅನುದಾನ ಹಾಗೂ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 2,317ಲಕ್ಷ ರೂ.ಅನುದಾನ ಉಳಿಕೆಯಾಗಿದೆ ಎಂದರು.
ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 544 ಲಕ್ಷ ರೂ. ಅನುದಾನ ಹಾಗೂ ಪಿಎಂಶ್ರೀ ಯೋಜನೆಯಡಿ 216 ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4,854 ಲಕ್ಷ ರೂ. ಅನುದಾನ ಮಂಜೂರಾಗಿದೆ. 2025-26ನೆ ಸಾಲಿನ ಬಜೆಟ್‍ನಲ್ಲಿ ಘೋಷಿಸಿದಂತೆ 50 ಸರಕಾರಿ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲು ಆದೇಶಿಸಿದೆ ಎಂದರು.
ಗೌರವಧನ ಹೆಚ್ಚಳಕ್ಕೆ ಆಗ್ರಹ :
ಆಡಳಿತ ಪಕ್ಷದ ಸದಸ್ಯೆ ನಯನಾ ಮೋಟಮ್ಮ, ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ 14 ಸಾವಿರ ರೂ. ಮಾಸಿಕ ಗೌರವಧನ ನೀಡಲಾಗುತ್ತಿದ್ದು, ಅದನ್ನು ಹೆಚ್ಚಿಸಬೇಕು. ಕನಿಷ್ಠ ವೇತನ ನೀಡಬೇಕು. ಕಾಫಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗಿಂತಲೂ ಕಡಿಮೆ ಗೌರವಧನ ದೊರೆಯುತ್ತಿದೆ. ಮಾಸಿಕ ರಜೆ, ಹೆರಿಗೆ ಸೌಲಭ್ಯ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, 12 ಸಾವಿರ ರೂ. ಇದ್ದ ಗೌರವ ಧನವನ್ನು 14 ಸಾವಿರ ರೂ. ಗೆ ಹೆಚ್ಚಿಸಲಾಗಿದೆ. ಗೌರವಧನದ ಜೊತೆಗೆ ಯಾವುದೇ ಸೌಲಭ್ಯಗಳನ್ನು ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ. ವಾರದಲ್ಲಿ 10 ಗಂಟೆಗಳ ಕಾರ್ಯಭಾರವನ್ನು ಅತಿಥಿ ಉಪನ್ಯಾಸಕರಿಗೆ ನಿಗದಿಪಡಿಸಲಾಗಿದೆ. ಮೆರಿಟ್ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.